ವಿಜಯವಾಡ, ಮೇ. 16 (DaijiworldNews/AK): ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದು ರಾಜ್ಯದಲ್ಲಿ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಕುತೂಹಲಕಾರಿಯಾದ ಯೋಜನೆಯನ್ನು ಘೋಷಿಸಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ರಾಜ್ಯದ ಯಾವುದೇ ಕುಟುಂಬದಲ್ಲಿ ಮೂರನೇ ಮಗುವಿನ ಜನನವಾದರೆ ಆ ಕುಟುಂಬಕ್ಕೆ ಸರ್ಕಾರವು 30,000 ರೂ. ಮತ್ತು ನಾಲ್ಕನೇ ಮಗುವಿಗೆ 40,000 ರೂ. ಪ್ರೋತ್ಸಾಹ ಧನ ನೀಡಲಿದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಜನಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಮಕ್ಕಳನ್ನು ಹೊರೆಯಾಗಿ ನೋಡುವ ಬದಲು ದೇಶದ ಸಂಪತ್ತಾಗಿ ನೋಡಬೇಕು ಎಂದು ಅವರು ಒತ್ತಿ ಹೇಳಿದರು. ಈ ಘೋಷಣೆ ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿದೆ ಎಂದು ಅವರು ಹೇಳಿದರು.
ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ, ಮೂರನೇ ಮಗುವಿನ ಜನನದ ಕುಟುಂಬಗಳಿಗೆ 30,000 ರೂ. ಮತ್ತು ನಾಲ್ಕನೇ ಮಗುವಿನ ಜನನಕ್ಕೆ 40,000 ರೂ.ಗಳನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು. “ನಾನು ಇದರ ಬಗ್ಗೆ ಹಲವು ಬಾರಿ ಯೋಚಿಸಿದ್ದೇನೆ. ಹಿಂದೆ, ನಾನು ಕುಟುಂಬ ಯೋಜನೆಗಾಗಿ ಕೆಲಸ ಮಾಡಿದ್ದೇನೆ. ಆದರೆ ಇಂದು ಮತ್ತೊಮ್ಮೆ, ಮಕ್ಕಳು ನಮ್ಮ ಸಂಪತ್ತು, ನಾವೆಲ್ಲರೂ ನಮ್ಮ ಮಕ್ಕಳ ಹಿತದೃಷ್ಟಿಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ಅದಕ್ಕಾಗಿಯೇ ನಾನು ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಮೂರನೇ ಮಗು ಹುಟ್ಟಿದ ತಕ್ಷಣ 30,000 ರೂ. ನೀಡುತ್ತೇವೆ. ನಾಲ್ಕನೇ ಮಗುವಿಗೆ ನಾವು 40,000 ರೂ. ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶವು ಸುಮಾರು 5.37 ಕೋಟಿಯಿಂದ 5.40 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇದು ಭಾರತದಲ್ಲಿ ಹತ್ತನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ.