ಬೆಂಗಳೂರು, ಮೇ. 09 (DaijiworldNews/AA): ಬಿಟ್ ಕಾಯಿನ್ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಸೇರಿದಂತೆ ಮೂವರು ಆರೋಪಿಗಳನ್ನು ಇಡಿ ಬಂಧಿಸಿದೆ.

ಶ್ರೀಕಿ ಅಲಿಯಾಸ್ ಶ್ರೀಕೃಷ್ಣ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗ್ಡೆ ಬಂಧಿತ ಆರೋಪಿಗಳು.
ಶುಕ್ರವಾರ ರಾತ್ರಿ ಇಡಿ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದು, ಶನಿವಾರ ಬೆಳಗ್ಗೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದಾರೆ. ಸದ್ಯ ಆರೋಪಿಗಳನ್ನು ಇಡಿ ಅಧಿಕಾರಿಗಳು 10 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಏಪ್ರಿಲ್ 20 ರಂದು ಇಡಿ ಅಧಿಕಾರಿಗಳು ಮಹಮ್ಮದ್ ನಲಪಾಡ್ ಮತ್ತು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಮೊಮ್ಮಗ ಹಕೀಬ್ ಮನೆಗಳ ಮೇಲೆ ದಾಳಿ ನಡೆಸಿದ್ದರು. ಒಟ್ಟು 12 ಸ್ಥಳಗಳಲ್ಲಿ ದಾಳಿ ನಡೆದಿತ್ತು. ದಾಳಿ ನಂತರ ಈ ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ವಿಚಾರಣೆ ಪೂರ್ಣಗೊಂಡ ನಂತರ, ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗ್ಡೆಯನ್ನು ಇಡಿ ಬಂಧಿಸಿದೆ.