ನವದೆಹಲಿ, ಮೇ. 09 (DaijiworldNews/AA): ಕೊರೋನಾ ಮಾದರಿಯ ಹ್ಯಾಂಟಾ ವೈರಸ್ ಸೋಂಕು ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಈ ವೈರಸ್ ಕಾಣಿಸಿಕೊಂಡಿದ್ದ ಹಡಗಿನಲ್ಲಿ ಇಬ್ಬರು ಭಾರತೀಯರಿದ್ದಾರೆ ಎಂದು ತಿಳಿದುಬಂದಿದೆ.

150 ಜನರನ್ನು ಹೊತ್ತು ಅರ್ಜೆಂಟೀನಾದಿಂದ ಸ್ಪೇನ್ನತ್ತ ಹೊರಟಿದ್ದ ಹಡಗಿನಿಂದ ಮಾರ್ಗಮಧ್ಯದಲ್ಲಿ ಹಲವರು ಇಳಿದಿದ್ದರು. ಬಳಿಕ ಉಳಿದಿದ್ದವರಲ್ಲಿ ೮ ಶಂಕಿತರ ಪೈಕಿ ಐವರಲ್ಲಿ ಸೋಂಕು ದೃಢಪಟ್ಟಿತ್ತು. ಇನ್ನೂ ಮೂವರು ಇದೇ ವೈರಸ್ನಿಂದಾಗಿ ಮೃತಪಟ್ಟಿದ್ದಾರೆ.
ಓಷನ್ ವೈಡ್ ಎಕ್ಸಿಪಿಡಿಷನ್ಸ್ ಸಂಸ್ಥೆ ನಿರ್ವಹಿಸುತ್ತಿರುವ ಈ ಐಷಾರಾಮಿ ಸಂಶೋಧನಾ ಹಡಗಿನಲ್ಲಿ ಕನಿಷ್ಠ ಇಬ್ಬರು ಭಾರತೀಯರು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರೆಲ್ಲರೊಂದಿಗಿದ್ದ ಭಾರತೀಯ ಸಿಬ್ಬಂದಿ ಸುರಕ್ಷಿತರಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಇನ್ನು ಮೇ 10ರಂದು ನೌಕೆ ಸ್ಪೇನ್ ತಲುಪಿದ ಬಳಿಕ ಅವರ ಆರೋಗ್ಯಸ್ಥಿತಿಯ ಬಗ್ಗೆ ಮಾಹಿತಿ ದೊರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ಹಡಗು ಏಪ್ರಿಲ್ 1ರಂದು ಉಶುವಾಯಾದಿಂದ ಪ್ರಯಾಣ ಆರಂಭಿಸಿತ್ತು. ಆರಂಭದಲ್ಲಿ ಸುಮಾರು 150 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 28 ದೇಶಗಳ ನಾಗರಿಕರು ಹಡಗಿನಲ್ಲಿದ್ದರು. ಏಪ್ರಿಲ್ 24ರಂದು ಕೆಲವರು ಸೆಂಟ್ ಹೆಲಿನಾ ದ್ವೀಪದಲ್ಲಿ ಇಳಿದಿದ್ದರು. ಪ್ರಯಾಣಿಕರ ಪಟ್ಟಿಯಲ್ಲಿ ಫಿಲಿಪೈನ್ಸ್, ಯುಕೆ, ಅಮೆರಿಕಾ, ನೆದರ್ಲ್ಯಾಂಡ್ಸ್, ಸ್ಪೇನ್, ಜರ್ಮನಿ, ಕೆನಡಾ ಹಾಗೂ ಭಾರತ ಸೇರಿದಂತೆ ಹಲವು ದೇಶಗಳ ನಾಗರಿಕರು ಇದ್ದರು ಎನ್ನಲಾಗಿದೆ.