ಚಿತ್ರದುರ್ಗ, ಮೇ. 08 (DaijiworldNews/AK):ನಗರದಲ್ಲಿ ನಾಳೆ (ಮೇ 09) ನಡೆಯಲಿರುವ ಬಿಎಸ್ವೈ ಅಭಿಮಾನೋತ್ಸವ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರರು ಬಳಸಿದ ಅಂಬಾಸಿಡರ್ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ.

ತಂದೆ ಬಳಸಿದ್ದ ಕಾರಿನ ಬಗ್ಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯ ಜೀವನದಲ್ಲಿ ಬಳಸಿದ ಸಿಕೆಆರ್ 45 ನಂಬರಿನ ಹಿಂದೂಸ್ತಾನ್ ಅಂಬಾಸಿಡರ್ ಕಾರನ್ನು ಇಡೀ ರಾಜ್ಯದ ಜನ ಗುರುತಿಸಿದ್ದಾರೆ, ಪತ್ತೆ ಹಚ್ಚುತ್ತಾರೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ನಾಳೆ ನಡೆಯಲಿರುವ ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಈ ಕಾರನ್ನು ತರಲಾಗಿದ್ದು, ಕಾರಿನ ವಿಶೇಷತೆಗಳ ಕುರಿತು ವಿಜಯೇಂದ್ರ ಅವರು ಇಂದು ಮಾಧ್ಯಮಗಳಿಗೆ ವಿವರಿಸಿದರು.
ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ರೈತನಾಯಕ ಎಂದು ಜನ ಗುರುತಿಸುತ್ತಾರೆ, ಪ್ರೀತಿಸುತ್ತಾರೆ. ಯಡಿಯೂರಪ್ಪ ಅವರ ಮೇಲೆ ನಾಡಿನ ಜನ ಯಾವ ರೀತಿಯ ಪ್ರೀತಿ ಮತ್ತು ಅಭಿಮಾನ ತೋರುತ್ತಾರೋ ಅದೇ ಸಿಕೆಆರ್ 45 ನಂಬರಿನ ಕಾರಿಗೂ ಜನ ಪ್ರೀತಿ ತೋರುತ್ತಾರೆ ಎಂದು ಹೇಳಿದರು.
ಆ ಕಾಲದಲ್ಲಿ ಕೇವಲ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಹಳ್ಳಿಗೆ ತೆಗೆದುಕೊಂಡು ಹೋಗಿ ಪಕ್ಷದ ಸಂಘಟನೆ ಬಲಪಡಿಸಲು ಬಿಎಸ್ವೈ ಸಾಕಷ್ಟು ಶ್ರಮಿಸಿದರು. ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಎಷ್ಟಿದೆಯೊ ಈ ಕಾರಿನ ಪಾತ್ರವೂ ಅಷ್ಟೇ ಇದೆ ಎಂದು ವಿವರಿಸಿದರು.
ಬಿಎಸ್ವೈ ಅವರೊಂದಿಗೆ ಅನಂತ ಕುಮಾರ್, ಡಿ.ಎಚ್.ಶಂಕರಮೂರ್ತಿ ಅವರು ಇದೇ ಕಾರಿನಲ್ಲಿ ರಾಜ್ಯದಲ್ಲಿ ಪ್ರವಾಸಲ್ಲಿ ಮಾಡಿದ್ದಾರೆ. ಆ ದಿನಗಳಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚಿದ್ದವು. ಯಡಿಯೂರಪ್ಪ ಇದೇ ಕಾರನ್ನು ಸದಾ ಬಳಸುತ್ತಿದ್ದರು. ಅವರ ಪ್ರವಾಸಕ್ಕೆ ಶಕ್ತಿ ತುಂಬಿದ್ದು ಈ ಕಾರು ಎಂದರು.
ಶಂಕರ್ ಎಂಬುವರು ಹತ್ತಾರು ವರ್ಷ ಚಾಲಕರಾಗಿದ್ದರು. ಮಂಜಣ್ಣ ಎಂಬ ಮತ್ತೊಬ್ಬರು ಚಾಲಕರಾಗಿದ್ದರು. ಅವರು ನಮ್ಮ ಕುಟುಂಬ ಸದಸ್ಯರಂತೆ ಹದಿನೈದು ವರ್ಷ ಕಾರು ಓಡಿಸಿದ್ದಾರೆ. ಒಮ್ಮೆ ಮಾತ್ರ ಕಾರು ಅಡಿಮೇಲಾಗಿದ್ದು ಮತ್ತೆ ಯಾವುದೇ ಅವಘಡ ಸಂಭವಿಸಿಲ್ಲ. ಸುರಕ್ಷಿತವಾಗಿ ಇಡೀ ರಾಜ್ಯದಲ್ಲಿ ಬಿಎಸ್ ವೈ ಅವರನ್ನು ಈ ಕಾರು ಸುತ್ತಾಡಿಸಿದೆ. ಇದರ ಮೇಲೆ ಅವರಿಗೆ ಅಪಾರ ಪ್ರೀತಿ ಇದೆ ಎಂದರು.
ಚಿತ್ರದುರ್ಗದ ಅಭಿಮಾನೋತ್ಸವಕ್ಕೆ ಈ ಕಾರನ್ನು ತರಬೇಕು ಎಂದು ನೂರಾರು ಕಾರ್ಯಕರ್ತರು ಅಸೆ ಪಟ್ಟಿದ್ದರು
ಅವರ ಒತ್ತಾಸೆಯಂತೆ ಇಲ್ಲಿಗೆ ಕಾರನ್ನು ತಂದಿದ್ದೇವೆ. ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ. ಎಲ್ಲರೂ ಬಂದು ಕಾರಿನ ಬಳಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.