ನವದೆಹಲಿ, ಮೇ. 08 (DaijiworldNews/TA): ತಮಿಳುನಾಡು ರಾಜಕಾರಣದಲ್ಲಿ ಉಂಟಾದ ದಿಢೀರ್ ಬೆಳವಣಿಗೆಗಳು ಇದೀಗ ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಚರ್ಚೆಗೆ ಕಾರಣವಾಗಿವೆ. ದಶಕಗಳ ಕಾಲ ಮೈತ್ರಿ ಮುಂದುವರಿಸಿಕೊಂಡು ಬಂದಿದ್ದ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಸಂಬಂಧದಲ್ಲಿ ಗಂಭೀರ ಬಿರುಕು ಕಾಣಿಸಿಕೊಂಡಿದ್ದು, ಅದರ ಪರಿಣಾಮ ಈಗ ನೇರವಾಗಿ ಲೋಕಸಭೆಯವರೆಗೂ ತಲುಪಿದೆ.

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಬದಲಾಗಿರುವ ರಾಜಕೀಯ ಸಮೀಕರಣಗಳ ನಡುವೆ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಪಕ್ಕದಲ್ಲಿ ಕುಳಿತುಕೊಳ್ಳಲು ಡಿಎಂಕೆ ನಿರಾಕರಿಸಿದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಸಂಬಂಧ ಡಿಎಂಕೆ ಹಿರಿಯ ನಾಯಕಿ ಹಾಗೂ ಸಂಸದೆ ಕನಿಮೊಳಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ಡಿಎಂಕೆ ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದು ಡಿಎಂಕೆ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ದೀರ್ಘಕಾಲದ ಮಿತ್ರಪಕ್ಷವಾಗಿದ್ದರೂ ಕಾಂಗ್ರೆಸ್ ಎದುರಾಳಿ ರಾಜಕೀಯ ಬಣದತ್ತ ಒಲವು ತೋರಿರುವುದು ಡಿಎಂಕೆ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಈ ವರ್ಷದ ಆರಂಭದಲ್ಲೇ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದವು. ಕಾಂಗ್ರೆಸ್ 40 ಕ್ಷೇತ್ರಗಳ ಬೇಡಿಕೆ ಇಟ್ಟಿದ್ದರೆ, ಡಿಎಂಕೆ 25ರಿಂದ 30 ಸ್ಥಾನಗಳನ್ನು ಮಾತ್ರ ನೀಡಲು ಸಿದ್ಧವಿತ್ತು. ಇದೇ ವಿಚಾರದಿಂದ ಎರಡೂ ಪಕ್ಷಗಳ ನಡುವೆ ಅಸಮಾಧಾನದ ವಾತಾವರಣ ನಿರ್ಮಾಣವಾಗಿತ್ತು. ತಮಿಳುನಾಡು ವಿಧಾನಸಭೆಯಲ್ಲಿ ಕೇವಲ ಐದು ಶಾಸಕರನ್ನು ಹೊಂದಿದ್ದರೂ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಗಾಗಿ ಒತ್ತಾಯಿಸಿದ್ದು, ಬಳಿಕ ಟಿವಿಕೆ ಪರ ನಿಂತಿರುವುದು ಮೈತ್ರಿ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಿದೆ ಎಂದು ಡಿಎಂಕೆ ವಲಯಗಳು ಹೇಳುತ್ತಿವೆ.
ಕನಿಮೊಳಿ ಅವರು ಸ್ಪೀಕರ್ಗೆ ಬರೆದಿರುವ ಪತ್ರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. “ರಾಜ್ಯದಲ್ಲಿ ನಮ್ಮ ವಿರೋಧಿ ಬಣವನ್ನು ಬೆಂಬಲಿಸುತ್ತಿರುವ ಪಕ್ಷದ ಸಂಸದರ ಪಕ್ಕದಲ್ಲಿ ಲೋಕಸಭೆಯಲ್ಲಿ ಕುಳಿತುಕೊಳ್ಳುವುದು ಇನ್ನು ಮುಂದೆ ಸೂಕ್ತವಲ್ಲ. ಹೀಗಾಗಿ ಡಿಎಂಕೆ ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ರಾಷ್ಟ್ರೀಯ ರಾಜಕೀಯದಲ್ಲೂ ಮಹತ್ವ ಪಡೆದುಕೊಂಡಿದ್ದು, ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ಏಕತೆಗೆ ಹೊಡೆತ ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆ ಆರಂಭವಾಗಿದೆ. ತಮಿಳುನಾಡಿನ ರಾಜಕೀಯದಲ್ಲಿ ಆರಂಭವಾದ ‘ಸೀಟು ಸಮರ’ ಈಗ ದೆಹಲಿಯ ಸಂಸತ್ ಭವನದೊಳಗೂ ಪರಿಣಾಮ ಬೀರಿರುವುದು ವಿಶೇಷವಾಗಿದೆ.