ಕೋಲ್ಕತ್ತಾ, ಮೇ. 08 (DaijiworldNews/AA): ಪಶ್ಚಿಮ ಬಂಗಾಳದ ಬಿಜೆಪಿ ನಾಯಕ, ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಸುವೇಂದು ಅಧಿಕಾರಿ ಆಪ್ತ ಕಾರ್ಯದರ್ಶಿ ಚಂದ್ರನಾಥ್ ರಥ್ ಹತ್ಯೆಯನ್ನು ಯೋಜಿತವಾಗಿ ನಡೆಸಲು ಬಿಹಾರದಿಂದ ಶಾರ್ಪ್ ಶೂಟರ್ಗಳನ್ನು ಕರೆಸಲಾಗಿತ್ತು ಹಾಗೂ ಬರೋಬ್ಬರಿ 40 ಲಕ್ಷ ರೂ.ಗಳ ಸುಪಾರಿ ನೀಡಲಾಗಿತ್ತು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಹತ್ಯೆಗಾಗಿ ಬಿಹಾರದಿಂದ ಇಬ್ಬರು ಶಾರ್ಪ್ ಶೂಟರ್ಸ್ ಬಂದಿದ್ದರು. ಹಂತಕರಿಗೆ 40 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ. ಕೃತ್ಯದ ನಂತರ ನಕಲಿ ಗುರುತಿನ ಚೀಟಿ ಬಳಸಿ ವಿಮಾನದ ಮೂಲಕ ಶಾರ್ಪ್ ಶೂಟರ್ಗಳು ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಂದ್ರನಾಥ್ ರಥ್ ಅವರ ಚಲನವಲನದ ಮೇಲೆ ಹಂತಕರು ಕಳೆದ ಐದು ದಿನಗಳಿಂದ ಹದ್ದಿನ ಕಣ್ಣಿಟ್ಟಿದ್ದರು. ಜೂನ್ 5ರ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಚಂದ್ರನಾಥ್ ಅವರು ಜೆಸೋರ್ ರಸ್ತೆಯ ಮೂಲಕ ಹಿಂತಿರುಗುತ್ತಿದ್ದಾಗ, ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಅವರ ಕಾರಿನ ವೇಗ ಕಡಿಮೆಯಾಗಿತ್ತು. ಇದನ್ನೇ ಕಾಯುತ್ತಿದ್ದ ಇಬ್ಬರು ಬೈಕ್ ಸವಾರರು, ಕಾರಿನ ಕಿಟಕಿಯ ಬಳಿ ಬಂದು ಅತಿ ಸಮೀಪದಿಂದ ಹಲವು ಸುತ್ತು ಗುಂಡಿನ ದಾಳಿ ನಡೆಸಿ ಚಂದ್ರನಾಥ್ ಅವರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಬಿಹಾರದಿಂದ ಬಂದಿದ್ದ ಶೂಟರ್ಗಳಿಗೆ ತಂಗಲು ವ್ಯವಸ್ಥೆ ಮತ್ತು ಓಡಾಡಲು ವಾಹನಗಳನ್ನು ಸ್ಥಳೀಯ ಕ್ರಿಮಿನಲ್ ಒಬ್ಬ ಒದಗಿಸಿದ್ದ ಎನ್ನಲಾಗಿದೆ. ಕೃತ್ಯಕ್ಕೆ ಬಳಸಲಾದ ಬೈಕ್ ಅನ್ನು ಬಿಧಾನ್ನಗರದ ಹಳೆಯ ವಾಹನಗಳ ಶೋರೂಮ್ನಿಂದ ಕಳವು ಮಾಡಲಾಗಿತ್ತು ಮತ್ತು ಅದರ ಇಂಜಿನ್ ಸಂಖ್ಯೆಯನ್ನು ತಿದ್ದಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಹತ್ಯೆ ನಡೆದ ಕೇವಲ 45 ಸೆಕೆಂಡುಗಳ ಮೊದಲು ಒಂದು ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ಅಲ್ಲಿಗೆ ಬಂದು ಹೋಗಿರುವುದು ಸಂಶಯ ಮೂಡಿಸಿದೆ.