ಬೆಂಗಳೂರು,ಮೇ. 08 (DaijiworldNews/AK): ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ನಗರವು ಇಂದಿಗೂ ದೇಶದ ಮೊದಲ ಮೂರು ಸ್ಥಾನಗಳಲ್ಲೇ ಮುಂದುವರಿದಿದೆ.

ಎನ್ಸಿಆರ್ಬಿ ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ದೇಶದ 19 ಪ್ರಮುಖ ಮೆಟ್ರೋಪಾಲಿಟನ್ ನಗರಗಳ ಪೈಕಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ದೆಹಲಿ ಮತ್ತು ಮುಂಬೈ ಮೊದಲ ಎರಡು ಸ್ಥಾನಗಳಲ್ಲಿವೆ. ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ.
2024ರಲ್ಲಿ ಬೆಂಗಳೂರಿನಲ್ಲಿ ದಾಖಲಾದ ಒಟ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು 4,748. ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ. ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ಜೈಪುರದೊಂದಿಗೆ ಬೆಂಗಳೂರು ದೇಶದಲ್ಲಿ 4ನೇ ಸ್ಥಾನದಲ್ಲಿದೆ.
2023ಕ್ಕೆ ಹೋಲಿಸಿದರೆ ಮಹಿಳೆಯರ ವಿರುದ್ಧದ ಒಟ್ಟು ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದ್ದರೂ, ಮಹಿಳೆಯರ ಮೇಲಿನ ದೌರ್ಜನ್ಯದ ತೀವ್ರತೆ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ.
ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಬದಲಾವಣೆಯಾಗಿಲ್ಲ. 2023ರಲ್ಲಿ 169 ಪ್ರಕರಣಗಳಿದ್ದರೆ, 2024ರಲ್ಲಿ 168 ಪ್ರಕರಣಗಳು ದಾಖಲಾಗಿವೆ. ಲೈಂಗಿಕ ಕಿರುಕುಳದ ಪ್ರಕರಣಗಳು ಕಳೆದ ವರ್ಷಕ್ಕಿಂತ 30ರಷ್ಟು ಕಡಿಮೆಯಾಗಿದ್ದು, ಒಟ್ಟು 180 ಪ್ರಕರಣಗಳು ವರದಿಯಾಗಿವೆ. ಆದರೆ, ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಕ್ರಿಮಿನಲ್ ದೌರ್ಜನ್ಯದ ಪ್ರಕರಣಗಳಲ್ಲಿ ಬೆಂಗಳೂರು ದೇಶಕ್ಕೆ 3ನೇ ಸ್ಥಾನದಲ್ಲಿದೆ . ಒಟ್ಟು 66 ಪ್ರಕರಣಗಳು ಬೆಳಕಿಗೆ ಬಂದಿದೆ.