ಕೋಲ್ಕತ್ತಾ, ಮೇ. 08 (DaijiworldNews/TA): ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಕೇಂದ್ರ ವೀಕ್ಷಕರಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಇಂದು ಕೋಲ್ಕತ್ತಾಗೆ ಆಗಮಿಸಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.

ಕೋಲ್ಕತ್ತಾ ತಲುಪಿದ ತಕ್ಷಣ ಅಮಿತ್ ಶಾ ಅವರು ಪ್ರಸಿದ್ಧ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಕುರಿತ ಮಹತ್ವದ ಸಭೆಗೂ ಮುನ್ನ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದಿರುವುದು ರಾಜಕೀಯವಾಗಿ ವಿಶೇಷ ಮಹತ್ವ ಪಡೆದಿದೆ.
ಇದಕ್ಕೂ ಮೊದಲು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರನ್ನು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಹಾಗೂ ಸಿಎಂ ರೇಸ್ನ ಪ್ರಮುಖ ಹೆಸರುಗಳಲ್ಲೊಬ್ಬರಾದ ಸುವೇಂದು ಅಧಿಕಾರಿ ಸ್ವಾಗತಿಸಿದರು. ಈ ವೇಳೆ ವಿಮಾನ ನಿಲ್ದಾಣದ ಹೊರಗೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಶಾ ಅವರಿಗೆ ಭರ್ಜರಿ ಸ್ವಾಗತ ಕೋರಿದರು.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಬಿಜೆಪಿಗೆ ಅಪಾರ ಪ್ರೀತಿ, ವಿಶ್ವಾಸ ಮತ್ತು ಬೆಂಬಲ ನೀಡಿದ ಬಂಗಾಳದ ಜನತೆಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಆಕಾಂಕ್ಷೆಗಳನ್ನು ಈಡೇರಿಸಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ” ಎಂದು ಹೇಳಿದರು. ಬಳಿಕ ಅವರು ಶಾಸಕಾಂಗ ಪಕ್ಷದ ಸಭೆ ನಡೆಯಲಿರುವ ಸ್ಥಳಕ್ಕೆ ತೆರಳಿದರು.
ಈ ನಡುವೆ ಬಿಜೆಪಿ ಸಂಸದ ರಾಹುಲ್ ಸಿನ್ಹಾ ಕೂಡ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. “ಮೇ 4ರ ನಂತರ ಅಮಿತ್ ಶಾ ಅಥವಾ ಯಾವುದೇ ಕೇಂದ್ರ ಸಚಿವರು ರಾಜ್ಯಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದವರು ಈಗ ಉತ್ತರ ಕೊಡಬೇಕು. ಅಮಿತ್ ಶಾ ಬರೋದಿಲ್ಲ ಎಂದವರೇ ಇಂದು ನೋಡಿ, ಅವರು ಇಲ್ಲಿದ್ದಾರೆ,” ಎಂದು ತಿರುಗೇಟು ನೀಡಿದರು.
ಮುಂದುವರಿದು ಮಾತನಾಡಿದ ಅವರು, “ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಿಸಲಾಗುತ್ತದೆ. ಇಂದು ಸಂಜೆ 6 ಗಂಟೆಯೊಳಗೆ ಎಲ್ಲವೂ ಸ್ಪಷ್ಟವಾಗಲಿದೆ” ಎಂದು ತಿಳಿಸಿದರು. ಇದೀಗ ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ತೀವ್ರಗೊಂಡಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯತ್ತ ರಾಜ್ಯದ ರಾಜಕೀಯ ವಲಯದ ಸಂಪೂರ್ಣ ಗಮನ ನೆಟ್ಟಿದೆ.