ಚೆನ್ನೈ, ಮೇ. 08 (DaijiworldNews/AA): ಬಹುಮತದ ಜೊತೆಗೆ ಡಿಎಂಕೆ - ಎಐಎಡಿಎಂಕೆ ಬಂದರೂ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗ. ಅದರಲ್ಲಿ ಯಾವುದೇ ತಪ್ಪಿಲ್ಲ ಅಂತಿಮವಾಗಿ ಸಂಖ್ಯೆ ಮುಖ್ಯ ಎಂದು ತಮಿಳುನಾಡು ರಾಜ್ಯಪಾಲ ಆರ್. ವಿ ಅರ್ಲೇಕರ್ ತಿಳಿಸಿದ್ದಾರೆ.

ದಳಪತಿ ವಿಜಯ್ 2 ಬಾರಿ ರಾಜ್ಯಪಾಲರನ್ನ ಭೇಟಿಯಾಗಿ ಹಕ್ಕು ಮಂಡಿಸಿದ್ದರು. ಆದರೆ ಬಹುಮತ ಸಾಬೀತುಪಡಿಸದ ಹಿನ್ನೆಲೆ ರಾಜ್ಯಪಾಲರು ವಿಜಯ್ ಮನವಿ ತಿರಸ್ಕರಿಸಿದ್ದರು. ಈ ನಡೆಗೆ ರಾಜ್ಯಪಾಲರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅವರು ಪ್ರತಿಕ್ರಿಯಿಸಿದ್ದಾರೆ.
"ಯಾವ ಪಕ್ಷ ಸರ್ಕಾರವನ್ನ ರಚಿಸುತ್ತೇವೆ ಎಂದು ಮುಂದೆ ಬರುತ್ತದೆಯೋ ಆ ಪಕ್ಷ ಬಹುಮತ ಇದೆ ಎನ್ನುವುದನ್ನು ನನಗೆ ಮನವರಿಕೆ ಮಾಡಬೇಕು. ಇದಕ್ಕಿಂತ ಹೆಚ್ಚು ನಾನು ಏನು ಕೇಳಿಲ್ಲ. ಯಾವುದೇ ಒಂದು ಪಕ್ಷ ಸರ್ಕಾರ ರಚಿಸಲು ಬಂದಾಗ ಅವರು ಬಹುಮತ ಇರುವ ಬಗ್ಗೆ ಖಾತ್ರಿಪಡಿಸಬೇಕು. ನಾನು ತಲೆ ಎಣಿಕೆಯನ್ನು ಕೇಳ್ತಿಲ್ಲ ಅದು ನನ್ನ ಅಧಿಕಾರ ಅಲ್ಲ, ಬಹುಮತವನ್ನ ವಿಧಾನಸಭೆಯಲ್ಲಿ ಸಾಬೀತುಪಡಿಸಲಿ" ಎಂದು ಹೇಳಿದರು.
"ಬಹುಮತದ ಜೊತೆಗೆ ಯಾರೇ ಬಂದರೂ (ಡಿಎಂಕೆ - ಎಐಎಡಿಎಂಕೆ ) ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗ. ಸಂಖ್ಯೆಗಳಿದ್ದರೇ ನಾನು ನಾಳೆಯೇ ಪ್ರಮಾಣ ವಚನ ಬೋಧಿಸಲು ಸಿದ್ಧವಿದ್ದೇನೆ. 118 ಸಂಖ್ಯೆಯೊಂದಿಗೆ ಟಿವಿಕೆ ಹೊರತಾಗಿ ಯಾರೂ ಬರದಿದ್ದರೆ ಏನು ಮಾಡಬಹುದು ಯೋಚಿಸಬೇಕು. ಸಂವಿಧಾನದ ಆಯ್ಕೆಗಳನ್ನು ಪರಿಶೀಲಿಸಬೇಕು" ಎಂದರು.
"ಎಸ್.ಆರ್ ಬೊಮ್ಮಾಯಿ ಪ್ರಕರಣ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ್ದಲ್ಲ. ಇದು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದೆ. ಬಹುಮತಕ್ಕೆ ಬೇಕಾದ ಸಂಖ್ಯೆ ಕೇಳುತ್ತಿದ್ದೇನೆ ನನ್ನ ಮುಂದೆ ತಲೆ ಎಣಿಕೆ ಮಾಡಲು ನಾನು ಹೇಳುತ್ತಿಲ್ಲ. ಅದನ್ನು ವಿಧಾನಸಭೆಯಲ್ಲಿ ಮಾಡಲಿ. ಕುದುರೆ ವ್ಯಾಪಾರ ಆರಂಭವಾಗಿರುವುದು ಒಳ್ಳೆ ಬೆಳವಣಿಗೆಯಲ್ಲ, ನಾನು ಸಮಸ್ಯೆಯನ್ನು ಶೀಘ್ರ ಬಗೆಹರಿಸಲು ಸಿದ್ಧವಿದ್ದೇನೆ, ಆದರೆ ಬಹುಮತಕ್ಕೆ ಸಂಖ್ಯೆಯೂ ಬೇಕು" ಎಂದು ತಿಳಿಸಿದರು.
"ಸಂಖ್ಯೆಗಳಿಲ್ಲದೇ ಪ್ರಮಾಣವಚನ ಬೋಧಿಸಿ ಬಹುಮತ ಸಾಬೀತು ಪಡಿಸಿ ಎಂದು ಹೇಳುವುದು ಸರಿಯಲ್ಲ. ಇದು ಅವರ ಸಮಸ್ಯೆಯಲ್ಲ. ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಸಂಖ್ಯೆ ಇಲ್ಲದೇ ಪ್ರಮಾಣ ವಚನ ಬೋಧಿಸುವುದು ಹೇಗೆ? ಇದರಿಂದ ಜನರಿಗೆ ಸಮಸ್ಯೆಯಾಗಲಿದೆ. ನಾನು ವಿಜಯ್ ತಡೆಯಲು ಪ್ರಯತ್ನಿಸುತ್ತಿಲ್ಲ, ನಾನು ಪ್ರಜಾಪ್ರಭುತ್ವಕ್ಕೆ ಆದ್ಯತೆ ಕೊಡಲು ನಾನಿಲ್ಲಿ ಕೂತಿದ್ದೇನೆ" ಎಂದು ವಾಗ್ದಾಳಿ ನಡೆಸಿದರು.