National
ವರ್ಕೌಟ್ ಆಗುತ್ತಾ ಕಿಂಗ್ ಮೇಕರ್ ಕರಾಮತ್ತು - ಏನಿದು ಸ್ಟಾಲಿನ್ ಮಾಸ್ಟರ್ಪ್ಲಾನ್?!
- Fri, May 08 2026 12:03:14 PM
-
ಚೆನ್ನೈ, ಮೇ. 08 (DaijiworldNews/TA): ತಮಿಳುನಾಡು ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದ್ದು, ಸರ್ಕಾರ ರಚನೆ ಕುರಿತ ಸಸ್ಪೆನ್ಸ್ ಇನ್ನಷ್ಟು ಗಟ್ಟಿಯಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆ, ಈಗ ರಾಜಕೀಯ ಲೆಕ್ಕಾಚಾರಗಳು ವೇಗ ಪಡೆದುಕೊಂಡಿವೆ. ಇದರ ನಡುವೆ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ತೆಗೆದುಕೊಂಡ ಮಹತ್ವದ ನಿರ್ಧಾರವು ಚೆನ್ನೈನಿಂದ ದೆಹಲಿವರೆಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮೇ 7ರಂದು ನಡೆದ ಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳು ಈಗ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿವೆ. ವಿಶೇಷವಾಗಿ “ನಿರ್ಣಯ 3” ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ. ಈ ನಿರ್ಣಯದ ಮೂಲಕ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರಿಗೆ ಅಗತ್ಯ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ನೀಡಲಾಗಿದೆ. ಮೇಲ್ನೋಟಕ್ಕೆ ಇದು ಸಾಮಾನ್ಯ ರಾಜಕೀಯ ನಿರ್ಣಯದಂತಿದ್ದರೂ, ಅದರ ಒಳಅರ್ಥವೇ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ.
ನಿರ್ಣಯದಲ್ಲಿ ತಮಿಳುನಾಡು ಮತ್ತೊಂದು ಚುನಾವಣೆಗೆ ಸಿದ್ಧವಾಗಿಲ್ಲ ಮತ್ತು ರಾಜ್ಯಕ್ಕೆ ಸ್ಥಿರ ಸರ್ಕಾರದ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ. ಇದೇ ಮಾತು ಡಿಎಂಕೆ ಹೊಸ ರಾಜಕೀಯ ತಂತ್ರ ರೂಪಿಸುತ್ತಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಡಿಎಂಕೆ ನೇರವಾಗಿ ಅಧಿಕಾರಕ್ಕೆ ಬರುವ ಬದಲು “ಕಿಂಗ್ಮೇಕರ್” ಪಾತ್ರದಲ್ಲಿ ಉಳಿಯುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.
ಈ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳುನಾಡು ವೆಟ್ರಿ ಕಳಗಂ (ಟಿವಿಕೆ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸಲು ಅಗತ್ಯವಿರುವ 118 ಸ್ಥಾನಗಳ ಸಂಖ್ಯೆಯನ್ನು ಮುಟ್ಟಲು ವಿಫಲವಾಗಿದೆ. ಕಾಂಗ್ರೆಸ್ ಬೆಂಬಲ ಇದ್ದರೂ ಬಹುಮತದ ಅಂತರ ಉಳಿದಿದೆ. ಇಂತಹ ಸಂದರ್ಭದಲ್ಲಿ ಡಿಎಂಕೆಯ ನಡೆ ನಿರ್ಣಾಯಕವಾಗಲಿದೆ ಎನ್ನಲಾಗುತ್ತಿದೆ.
ಸ್ಟಾಲಿನ್ ಹೊರಗಿನಿಂದ ಬೆಂಬಲ ನೀಡಲು ತೀರ್ಮಾನಿಸಿದರೆ, ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಸುಲಭವಾಗಿ ಬಹುಮತ ಸಾಬೀತುಪಡಿಸಬಹುದು. ಇದರಿಂದ ಡಿಎಂಕೆಗೆ ಎರಡು ದೊಡ್ಡ ಲಾಭಗಳಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಮೊದಲನೆಯದಾಗಿ, ಸರ್ಕಾರದಲ್ಲಿ ನೇರವಾಗಿ ಸೇರದೇ ಇದ್ದರೂ ತನ್ನ ದ್ರಾವಿಡ ಮಾದರಿ ಯೋಜನೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಉಚಿತ ಶಾಲಾ ಉಪಹಾರ ಯೋಜನೆ, ಮಹಿಳೆಯರಿಗೆ ಮಾಸಿಕ ಹಣಕಾಸು ನೆರವು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳು ಡಿಎಂಕೆಯ ರಾಜಕೀಯ ಗುರುತುಗಳಾಗಿವೆ. ಹೊರಗಿನ ಬೆಂಬಲದ ಮೂಲಕ ಈ ಯೋಜನೆಗಳು ಮುಂದುವರಿಯುವಂತೆ ನೋಡಿಕೊಳ್ಳಬಹುದು.
ಇನ್ನೊಂದೆಡೆ, ಸರ್ಕಾರದ ಭಾಗವಾಗದೇ ಇದ್ದರೂ ಡಿಎಂಕೆ ತನ್ನ ರಾಜಕೀಯ ಪ್ರಭಾವವನ್ನು ಉಳಿಸಿಕೊಂಡೇ ಸರ್ಕಾರದ ಮೇಲೆ ಒತ್ತಡ ಕಾಯ್ದುಕೊಳ್ಳಬಹುದು. ಅಗತ್ಯ ಬಿದ್ದರೆ ಬೆಂಬಲ ಹಿಂತೆಗೆದುಕೊಳ್ಳುವ ಆಯ್ಕೆಯೂ ಕೈಯಲ್ಲಿರುತ್ತದೆ.
ಡಿಎಂಕೆಯ ಈ ತಂತ್ರದ ಹಿಂದೆ ಬಿಜೆಪಿ ವಿರೋಧಿ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ. ಪಕ್ಷದ ನಿರ್ಣಯದಲ್ಲಿ “ಕೋಮುವಾದಿ ಶಕ್ತಿಗಳ ವಿರುದ್ಧ ಸಂಪೂರ್ಣ ಹೋರಾಟ” ಎಂಬ ಉಲ್ಲೇಖವೂ ಗಮನ ಸೆಳೆದಿದೆ. ಇದನ್ನು ಬಿಜೆಪಿ ವಿರುದ್ಧದ ಸ್ಪಷ್ಟ ಸಂದೇಶವೆಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ. ಅತಂತ್ರ ವಿಧಾನಸಭೆಯ ಪರಿಸ್ಥಿತಿಯನ್ನು ಬಳಸಿಕೊಂಡು ಬಿಜೆಪಿ ತಮಿಳುನಾಡು ರಾಜಕೀಯದಲ್ಲಿ ಹಿಂಬಾಗಿಲಿನಿಂದ ಪ್ರವೇಶಿಸದಂತೆ ತಡೆಯುವ ಪ್ರಯತ್ನವೇ ಇದು ಎನ್ನಲಾಗುತ್ತಿದೆ.
ಟಿವಿಕೆಗೆ ಡಿಎಂಕೆ ಬೆಂಬಲ ಸಿಕ್ಕರೆ, ಬಿಜೆಪಿಯನ್ನು ಸಂಪೂರ್ಣವಾಗಿ ಅಧಿಕಾರ ಸಮೀಕರಣದಿಂದ ದೂರ ಇಡಬಹುದು. ಹೀಗಾಗಿ ಸ್ಟಾಲಿನ್ ಒಂದೇ ಹೆಜ್ಜೆಯಲ್ಲಿ ಹಲವು ರಾಜಕೀಯ ಗುರಿಗಳನ್ನು ಸಾಧಿಸಲು ಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವಿಜಯ್ ಅವರನ್ನು ತನ್ನ ಪ್ರಭಾವದ ವ್ಯಾಪ್ತಿಯಲ್ಲೇ ಇಡುವುದು, ಬಿಜೆಪಿಯನ್ನು ತಡೆಯುವುದು ಮತ್ತು ಜವಾಬ್ದಾರಿಯುತ ರಾಜಕೀಯ ನಾಯಕನಾಗಿ ತಾನು ಕಾಣಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶಗಳೆಂದು ಹೇಳಲಾಗುತ್ತಿದೆ.
ಇದೀಗ ಈ ಬೆಳವಣಿಗೆಯಲ್ಲಿ ಕಾಂಗ್ರೆಸ್ ದೊಡ್ಡ ಹೊಡೆತ ಅನುಭವಿಸಿರುವ ಪಕ್ಷವಾಗಿ ಕಾಣುತ್ತಿದೆ. ಡಿಎಂಕೆ ತನ್ನ ನಿರ್ಣಯದಲ್ಲಿ ಕಾಂಗ್ರೆಸ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮೈತ್ರಿ ಧರ್ಮ ಪಾಲನೆಯಿಲ್ಲ ಎಂಬ ಆರೋಪ ಮಾಡಿದೆ. ಟಿವಿಕೆ ಕಡೆ ಕಾಂಗ್ರೆಸ್ ಒಲವು ತೋರಿರುವುದು ಡಿಎಂಕೆಗೆ ಅಸಮಾಧಾನ ತಂದಿದೆ ಎನ್ನಲಾಗುತ್ತಿದೆ. ದೀರ್ಘಕಾಲದ ಮೈತ್ರಿಯಲ್ಲಿ ಬಿರುಕು ಮೂಡಿರುವುದು ಈಗ ಬಹಿರಂಗವಾಗಿದ್ದು, ಮುಂದಿನ ದಿನಗಳಲ್ಲಿ ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ಪಾತ್ರ ಇನ್ನಷ್ಟು ಕುಗ್ಗುವ ಸಾಧ್ಯತೆಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ಚುನಾವಣಾ ಫಲಿತಾಂಶದ ಬಳಿಕ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿ ವಿಜಯ್ ಅವರನ್ನು ಅಧಿಕಾರದಿಂದ ದೂರ ಇಡಲು “ಗ್ರ್ಯಾಂಡ್ ದ್ರಾವಿಡ ಮೈತ್ರಿ” ರೂಪಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ನೋಡಿದರೆ ಅದು ಬಹುತೇಕ ಅಸಾಧ್ಯವೆಂದು ಹೇಳಲಾಗುತ್ತಿದೆ. ಡಿಎಂಕೆ ಮತ್ತು ಎಐಎಡಿಎಂಕೆ ದಶಕಗಳಿಂದ ಕಠಿಣ ರಾಜಕೀಯ ಪ್ರತಿಸ್ಪರ್ಧಿಗಳಾಗಿದ್ದು, ತಳಮಟ್ಟದ ಕಾರ್ಯಕರ್ತರಲ್ಲೂ ತೀವ್ರ ವೈಚಾರಿಕ ಸಂಘರ್ಷವಿದೆ. ಹೀಗಾಗಿ ಅಧಿಕಾರಕ್ಕಾಗಿ ಕೈಜೋಡಿಸುವುದು ಕಾರ್ಯಕರ್ತರಿಗೆ ಒಪ್ಪುವ ಸಾಧ್ಯತೆ ಕಡಿಮೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ಟಾಲಿನ್ ಹೊಸ ಮಾದರಿಯ ರಾಜಕೀಯ ತಂತ್ರವನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ತಮಿಳುನಾಡು ರಾಜಕೀಯವು ದೀರ್ಘಕಾಲ ಕರುಣಾನಿಧಿ ಮತ್ತು ಜಯಲಲಿತಾ ಮಾದರಿಯ ಸುತ್ತಲೇ ತಿರುಗುತ್ತಿತ್ತು. ಆದರೆ ವಿಜಯ್ ರಾಜಕೀಯ ಪ್ರವೇಶದ ಬಳಿಕ ಸಮೀಕರಣವೇ ಬದಲಾಗಿದೆ. ನೇರ ಮುಖಾಮುಖಿ ರಾಜಕೀಯ ತನಗೆ ಅಪಾಯಕಾರಿಯಾಗಬಹುದು ಎಂಬುದನ್ನು ಸ್ಟಾಲಿನ್ ಅರ್ಥಮಾಡಿಕೊಂಡಿದ್ದು, “ನಿಯಂತ್ರಿತ ಬೆಂಬಲ” ತಂತ್ರದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ರಾಜಕೀಯ ಸೂತ್ರ ಯಶಸ್ವಿಯಾದರೆ, ತಮಿಳುನಾಡು ಮೊದಲ ಬಾರಿಗೆ ವಿಭಿನ್ನ ರಾಜಕೀಯ ಮಾದರಿಯನ್ನು ಕಾಣಬಹುದು. ಅತಿದೊಡ್ಡ ಪಕ್ಷವಾಗಿರುವ ಟಿವಿಕೆ ಸರ್ಕಾರ ನಡೆಸಿದರೆ, ಡಿಎಂಕೆ ತೆರೆಮರೆಯಿಂದ ಅಧಿಕಾರದ ಸಮತೋಲನ ಕಾಯ್ದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.