ಲಕ್ನೋ, ಮೇ. 08 (DaijiworldNews/AA): ಯುಪಿಎಸ್ಸಿ ಪರೀಕ್ಷೆಯನ್ನು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ನಂತಹ ಉನ್ನತ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸಲಾಗುತ್ತದೆ. 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ 102ನೇ ರ್ಯಾಂಕ್ ಪಡೆದ ಪ್ರಶಾಂತ್ ಸಿಂಗ್ ಅವರ ಯಶೋಗಾಥೆ ಇದು.

ಪ್ರಶಾಂತ್ ಅವರು ಲಕ್ನೋದ ಸಿಎಂಎಸ್ ಅಲಿಗಂಜ್ ಶಾಖೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ, ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಮೂಲತಃ ಜೌನ್ಪುರ ಜಿಲ್ಲೆಯ ಖಲೀಲ್ಪುರ ಗ್ರಾಮದವರಾದ ಇವರ ತಂದೆ ಸುಶೀಲ್ ಸಿಂಗ್ ಸರ್ಕಾರಿ ಸೇವೆಯಲ್ಲಿದ್ದಾರೆ. ತಾಯಿ ಕನಕಲತಾ ಗೃಹಿಣಿಯಾಗಿದ್ದಾರೆ. ಪ್ರಶಾಂತ್ಗೆ ಇಬ್ಬರು ಸಹೋದರಿಯರಿದ್ದು, ಅವರು ಕೂಡ ಆಡಳಿತಾತ್ಮಕ ಸೇವೆಗಳಿಗೆ ತಯಾರಿ ನಡೆಸುತ್ತಿದ್ದಾರೆ.
ಪ್ರಶಾಂತ್ ಅವರು ತಮ್ಮ ಮೊದಲ ಮೂರು ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು. ಅವರು ನಾಲ್ಕನೇ ಬಾರಿಗೆ ಪರೀಕ್ಷೆಗೆ ದಿನಕ್ಕೆ ಎಂಟು ಗಂಟೆಗಳ ಕಾಲ ವ್ಯಾಸಂಗ ಮಾಡಿ ತಯಾರಿ ನಡೆಸಿದರು. ಅಂತಿಮವಾಗಿ 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ 102ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
"ನೀವು ವಿಫಲರಾದರೂ ಧೃತಿಗೆಡಬಾರದು. ಎಂದಿಗೂ ಪ್ರಯತ್ನವನ್ನು ಬಿಡಬಾರದು. ಇದೇ ತತ್ವವು ನನ್ನ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡಿತು" ಎಂದು ಅವರು ತಿಳಿಸಿದ್ದಾರೆ.
"ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲ. ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡಿ ಮತ್ತು ಸೋಲಿನ ನಂತರವೂ ಎದೆಗುಂದಬೇಡಿ. ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ" ಎಂದು ಅವರು ಹೇಳಿದ್ದಾರೆ.