ಕೋಲ್ಕತ್ತಾ, ಮೇ. 07 (DaijiworldNews/AA): ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ ಕಾರಣ ರಾಜ್ಯಪಾಲರು ತಮ್ಮ ಸಾಂವಿಧಾನಿಕ ವೀಟೋ ಬಳಸಿ ವಿಧಾನಸಭೆ ವಿಸರ್ಜಿಸಿ ಅಧಿಸೂಚನೆ ಹೊರಡಿಸಿದ್ದಾರೆ.

ಭಾರತೀಯ ಸಂವಿಧಾನದ 174(2)(ಬಿ) ವಿಧಿಯ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯಪಾಲರ ಸೂಚನೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ದುಷ್ಯಂತ್ ನರಿಯಾಲ ಅವರು ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ಅಸ್ತಿತ್ವದಲ್ಲಿಲ್ಲ. ರಾಜ್ಯಪಾಲರ ಈ ಕಠಿಣ ಕ್ರಮವು ಬಂಗಾಳದ ರಾಜಕೀಯದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಸಂಪುಟ ಮತ್ತು ವಿಧಾನಸಭೆ ಎರಡೂ ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲ್ಪಟ್ಟಿವೆ ಎಂದು ಆದೇಶಿಸಿದ್ದಾರೆ.
ಟಿಎಂಸಿಗೆ ಸೋಲಾಗಿಲ್ಲ, ಚುನಾವಣಾ ಆಯೋಗದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಗಳಿಸಿದೆ. ಬೇಕಿದ್ದರೆ ರಾಜ್ಯಪಾಲರೇ ನನ್ನನ್ನು ವಜಾ ಮಾಡಲಿ ಎಂದು ಮಮತಾ ಬ್ಯಾನರ್ಜಿ ಅವರು ಸವಾಲು ಎಸೆದಿದ್ದರು.
ಭಾರತದ ಸಂವಿಧಾನದ 172ನೇ ವಿಧಿಯ ಪ್ರಕಾರ, ವಿಧಾನಸಭೆಯು ತನ್ನ ಮೊದಲ ಸಭೆಯಿಂದ ಐದು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ. ಅದರಂತೆ 2021ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಭೆಯ ಅವಧಿಯು ಇಂದು ಪೂರ್ಣಗೊಂಡಿದ್ದು 17ನೇ ವಿಧಾನಸಭೆ ಅವಧಿ ಅಧಿಕೃತವಾಗಿ ಅಂತ್ಯವಾಗಿದೆ.
ಅಂತ್ಯಗೊಂಡ ಬೆನ್ನಲ್ಲೇ ಆರ್ಎನ್ ರವಿ ಅವರು ಸಂವಿಧಾನದ 164(1)ನೇ ವಿಧಿಯಡಿ ಮೇ 07 ರಿಂದ ಜಾರಿಗೆ ಬರುವಂತೆ ಮಮತಾ ಬ್ಯಾನರ್ಜಿ ನೇತೃತ್ವದ ಸಚಿವ ಸಂಪುಟವನ್ನು ವಜಾಗೊಳಿಸಿ ವಿಧಾನಸಭೆಯನ್ನು ವಜಾಗೊಳಿಸಿದ್ದಾರೆ.
ಈ ಅವಧಿ ಮುಕ್ತಾಯದೊಂದಿಗೆ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲಾ 294 ಶಾಸಕರ ಸದಸ್ಯತ್ವವು ಅಧಿಕೃತವಾಗಿ ರದ್ದಾಗಿದೆ. ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರೂ ಸಹ ಸಂವಿಧಾನದ ನಿಯಮದಂತೆ ಅವರು ಈಗ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ.