ಕೋಲ್ಕತ್ತಾ, ಮೇ. 07 (DaijiworldNews/AA): ಮಮತಾ ಬ್ಯಾನರ್ಜಿಯವರನ್ನು ಭವಾನಿಪುರದಲ್ಲಿ ಸೋಲಿಸಿದ್ದಕ್ಕೆ ನನ್ನ ಪಿಎ ಚಂದ್ರನಾಥ್ ರಥ ಅವರನ್ನು ಹತ್ಯೆ ಮಾಡಲಾಗಿದೆ. ನನ್ನ ಸಹಾಯಕರಾಗಿದ್ದಕ್ಕೆ ರಥ ಅವರನ್ನು ಕೊಲ್ಲಲಾಗಿದೆ. ಈ ಕೊಲೆ ಪೂರ್ವಯೋಜಿತ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ರಥ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಮಧ್ಯಮಗ್ರಾಮದಲ್ಲಿರುವ ಅವರ ನಿವಾಸಕ್ಕೆ ತರುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊಲೆ ನಡೆದ ರೀತಿಯನ್ನು ನಾವು ಎಷ್ಟು ಖಂಡಿಸಿದರೂ ಸಾಲದು. ಹತ್ಯೆ ಮಾಡಿದವರನ್ನು ಬಂಧಿಸಬೇಕು. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಕುಟುಂಬದ ಬೇಡಿಕೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅವರ ಮೇಲೆ 4 ಗುಂಡುಗಳು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ನಾನು ಅವರ ಕುಟುಂಬದ ಜೊತೆ ನಿಲ್ಲುತ್ತೇನೆ" ಎಂದು ಹೇಳಿದರು.
"ಹಲವಾರು ದಿನಗಳ ಕಾಲ ಗಮನಿಸಿ ಸಂಚು ರೂಪಿಸಿ ಈ ದಾಳಿ ನಡೆಸಲಾಗಿದೆ. ಅವರ ಮೇಲೆ ಗುಂಡು ಹಾರಿಸುವ ಮೊದಲು ಕಾರನ್ನು ಹಿಂಬಾಲಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹತ್ತಿರದಿಂದ ಗುಂಡುಗಳನ್ನು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. ಸಾವನ್ನು ಖಚಿತಪಡಿಸಿಕೊಳ್ಳಲು ಇಷ್ಟು ಹತ್ತಿರದಿಂದ ದಾಳಿ ನಡೆಸಲಾಗಿದೆ" ಎಂದು ತಿಳಿಸಿದರು.
"ಇದು ಸಾಮಾನ್ಯ ಅಪರಾಧವಲ್ಲ, ಸುಪಾರಿ ಕೊಲೆಗಾರರಿಂದ ನಡೆಸಲಾದ ಯೋಜಿತ ದಾಳಿಯಾಗಿದೆ. ರಥ ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ ಮತ್ತು ರಾಜಕೀಯ ದ್ವೇಷವಿರಲಿಲ್ಲ. ಅವರ ಏಕೈಕ ಗುರುತು ನನ್ನೊಂದಿಗೆ ಕೆಲಸ ಮಾಡಿದ್ದಾರೆ ಎಂಬುದಷ್ಟೇ ಆಗಿದೆ" ಎಂದರು.