ಚಿತ್ರದುರ್ಗ, ಮೇ. 07 (DaijiworldNews/AK): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೋರಾಟ, ಪಾದಯಾತ್ರೆ, ಪಕ್ಷವನ್ನು ಸದೃಢವಾಗಿ ಕಟ್ಟಿದ್ದು- ಇವೆಲ್ಲವೂ ನನ್ನನ್ನೂ ಸೇರಿ ಎಲ್ಲ ಇಂದಿನ ಯುವ ರಾಜಕಾರಣಿಗಳಿಗೆ ಪ್ರೇರಣೆ ನೀಡುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಇಲ್ಲಿ ಮಾತನಾಡಿದ ಅವರು, ನಾಳೆ ಸಂಜೆ ಯಡಿಯೂರಪ್ಪನವರ ಪುರಪ್ರವೇಶ ನಡೆಯಲಿದೆ. ನಾಡಿದ್ದಿನ ಅಭಿಮಾನೋತ್ಸವಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಜನರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ರಾಜಕೀಯೇತರವಾಗಿ ಬಿಎಸ್ವೈ ಅಭಿಮಾನೋತ್ಸವವನ್ನು ಆಯೋಜಿಸಲಾಗುತ್ತಿದೆ. ಸಮಯದ ಅಭಾವದಿಂದ ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಸಾವಿರಾರು ಸ್ವಾಮೀಜಿಗಳು, ಲಕ್ಷಾಂತರ ಅಭಿಮಾನಿಗಳು ಭಾಗವಹಿಸುತ್ತಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಯಡಿಯೂರಪ್ಪ ಅವರೆಂದರೆ ಹೋರಾಟಗಾರರು. ಅವರು ನಗರಕ್ಕೆ ಸೀಮಿತವಾಗಿದ್ದ ಪಕ್ಷವು ಹಳ್ಳಿ ಹಳ್ಳಿಗೂ ವಿಸ್ತರಿಸಲು ಕಾರಣವಾದವರು. ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಸ ಮಾಡಿ ಪಕ್ಷ ಸಂಘಟಿಸಿದವರು ಎಂದು ಪ್ರಶ್ನೆಗೆ ಉತ್ತರ ನೀಡಿದರು.