ಪಾಟ್ನಾ, ಮೇ. 07 (DaijiworldNews/AA): ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್ಡಿಎ ಸರ್ಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದೆ. ಬಿಹಾರದ ಮಾಜಿ ಸಿಎಂ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಸೇರಿ 31 ಎನ್ಡಿಎ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಾಜಿ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್, ಬಿಜೆಪಿ, ಜೆಡಿಯು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ)ದ 31 ನಾಯಕರೊಂದಿಗೆ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು 31 ಎನ್ಡಿಎ ನಾಯಕರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ನೂತನ ಸಂಪುಟದಲ್ಲಿ ಅನುಭವ ಮತ್ತು ಯುವ ಉತ್ಸಾಹಕ್ಕೆ ಆದ್ಯತೆ ನೀಡಲಾಗಿದೆ. ನಿಶಾಂತ್ ಕುಮಾರ್ ಸಂಪುಟ ಸೇರಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಅನುಭವಿಗಳಾದ ಶ್ರಾವಣ್ ಕುಮಾರ್ ಮತ್ತು ಅಶೋಕ್ ಚೌಧರಿ ಅವರು ಮತ್ತೆ ಸಂಪುಟ ಸೇರಿದ್ದಾರೆ. ಎನ್ಡಿಎ ಮೈತ್ರಿಕೂಟದ ಐದೂ ಪಕ್ಷಗಳಾದ ಬಿಜೆಪಿ, ಜೆಡಿ(ಯು), ಎಲ್ಜೆಪಿ (ರಾಮ್ ವಿಲಾಸ್), ಹ್ಯಾಮ್ (HAM) ಮತ್ತು ಆರ್ಎಲ್ಎಂ ನಾಯಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ.