ಚೆನ್ನೈ, ಮೇ. 07 (DaijiworldNews/AK): ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ದಿನಗಳು ಕಳೆದರೂ ಸರ್ಕಾರ ರಚನೆಯ ಕಗ್ಗಂಟು ಮಾತ್ರ ಇನ್ನೂ ಮುಂದುವರಿದಿದೆ.

ಈ ನಡುವೆ, ಟಿವಿಕೆ ಅಧ್ಯಕ್ಷ ವಿಜಯ್ ಅವರು ಗುರುವಾರ ಬೆಳಗ್ಗೆ ರಾಜ್ಯಪಾಲ ಆರ್ವಿ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಎರಡು ದಿನಗಳಲ್ಲಿ ಇದು ರಾಜ್ಯಪಾಲರೊಂದಿಗೆ ವಿಜಯ್ ನಡೆಸುತ್ತಿರುವ ಎರಡನೇ ಮಹತ್ವದ ಸಭೆಯಾಗಿದೆ.
ಸರ್ಕಾರ ರಚಿಸಲು 118 ಸದಸ್ಯರ ಬಲದ ಅಗತ್ಯವಿದ್ದು, ವಿಜಯ್ ಅವರ ಹಾದಿ ಸವಾಲಿನಿಂದ ಕೂಡಿದೆ. ವಿಜಯ್ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಳಿಕ ಟಿವಿಕೆ ಬಲ 107 ಆಗಲಿದೆ. ಕಾಂಗ್ರೆಸ್ನ 5 ಶಾಸಕರು ಈಗಾಗಲೇ ಬೆಂಬಲ ಪತ್ರ ನೀಡಿದ್ದಾರೆ.
ಈಗ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹೊಸ ಬೆಂಬಲದೊಂದಿಗೆ ವಿಜಯ್ ಪಾಳಯದ ಬಲ ಮತ್ತಷ್ಟು ಹೆಚ್ಚಿದ್ದು, ಬಹುಮತದ ಗಡಿಯನ್ನು ತಲುಪಲು ಕೇವಲ ಕೆಲವೇ ಸ್ಥಾನಗಳ ಅವಶ್ಯಕತೆ ಇದೆ.