ಬೆಂಗಳೂರು, ಮೇ. 07 (DaijiworldNews/TA): ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡುತ್ತಿರುವ ಸೈಬರ್ ವಂಚಕರ ಹೊಸ ತಂತ್ರಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಕುಟುಂಬ ಬಲಿಯಾಗಿದೆ. ಜಯನಗರದ 78 ವರ್ಷದ ಗೃಹಿಣಿ ಮತ್ತು ಆಕೆಯ ಪುತ್ರಿಯಿಂದ ವಂಚಕರು ಬರೋಬ್ಬರಿ ರೂ. 2.1 ಕೋಟಿ ಹಣ ಕಸಿದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಏಪ್ರಿಲ್ 13ರಂದು ಸಂತ್ರಸ್ತ ಮಹಿಳೆಗೆ ವಾಟ್ಸಾಪ್ ಮೂಲಕ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ಎನ್ಐಎ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಮಹಿಳೆಯ ಹೆಸರಿನ ಡೆಬಿಟ್ ಕಾರ್ಡ್ ಅನ್ನು ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯನೊಬ್ಬ ಬಳಸುತ್ತಿದ್ದಾನೆ ಎಂದು ಹೇಳಿ ಭಯಭೀತಳನ್ನಾಗಿಸಿದ್ದಾನೆ.
ಪ್ರಕರಣ ಗಂಭೀರವಾಗಿರುವುದರಿಂದ ಈ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂದು ಎಚ್ಚರಿಕೆ ನೀಡಿದ ವಂಚಕ, ಮಹಿಳೆ ಮತ್ತು ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಕೂಡ ಪಡೆದುಕೊಂಡಿದ್ದಾನೆ. ಬಳಿಕ ಮಹಿಳೆಯ ಪುತ್ರಿಯೂ ಇದೇ ಪ್ರಕರಣದಲ್ಲಿ ಶಂಕಿತಳಾಗಿದ್ದಾಳೆ ಎಂದು ಹೇಳಿ ಇಬ್ಬರನ್ನೂ ಮಾನಸಿಕ ಒತ್ತಡಕ್ಕೆ ಒಳಪಡಿಸಿದ್ದಾನೆ.
ವಂಚಕರು ಪೊಲೀಸ್ ಠಾಣೆಯಂತೆ ಕಾಣುವ ಸ್ಥಳದಿಂದ ವಿಡಿಯೋ ಕಾಲ್ ಮಾಡಿ ನಂಬಿಕೆ ಮೂಡಿಸಿದ್ದು, ತನ್ನ ಹೆಸರು ಪ್ರದೀಪ್ ಜಸ್ವಾಲ್ ಎಂದು ಪರಿಚಯಿಸಿಕೊಂಡಿದ್ದಾರೆ ಎನ್ನಲಾಗಿದೆ. “ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಲಾಗುವುದು” ಎಂದು ಬೆದರಿಕೆ ಹಾಕಿ ಮಹಿಳೆ ಹಾಗೂ ಪುತ್ರಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ನಂತರ ಹಣಕಾಸು ವ್ಯವಹಾರಗಳ ಪರಿಶೀಲನೆ ನಡೆಸಬೇಕಿದೆ ಮತ್ತು ಅದೇ ಬಂಧನ ತಪ್ಪಿಸಿಕೊಳ್ಳುವ ಏಕೈಕ ಮಾರ್ಗ ಎಂದು ನಂಬಿಸಿ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾರೆ. ಆರ್ಬಿಐ ಮಾರ್ಗಸೂಚಿಯಂತೆ ಪರಿಶೀಲನೆ ಮುಗಿದ ಬಳಿಕ ಸಂಪೂರ್ಣ ಹಣವನ್ನು ಮರಳಿ ನೀಡಲಾಗುವುದು ಎಂದು ಹೇಳಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಲು ಸೂಚಿಸಿದ್ದಾರೆ.
ವಂಚಕರ ಮಾತು ನಂಬಿದ ಮಹಿಳೆ ತನ್ನ ಜೀವಮಾನ ಉಳಿತಾಯದ ಹಣವನ್ನೇ ವರ್ಗಾಯಿಸಿದ್ದು, ಅದಕ್ಕೂ ಮೀರಿಯಾಗಿ ಚಿನ್ನವನ್ನು ಗಿರವಿ ಇಟ್ಟು ಗೋಲ್ಡ್ ಲೋನ್ ಪಡೆದು ಅದರ ಹಣವನ್ನೂ ಆರೋಪಿಗಳ ಖಾತೆಗೆ ಜಮೆ ಮಾಡಿದ್ದಾರೆ. ಏಪ್ರಿಲ್ 15ರಿಂದ 23ರವರೆಗೆ ನಡೆದ ಹಲವು ಆರ್ಟಿಜಿಎಸ್ ವ್ಯವಹಾರಗಳ ಮೂಲಕ ಒಟ್ಟು ರೂ. 2.1 ಕೋಟಿ ಹಣ ವರ್ಗಾವಣೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇಷ್ಟಾದರೂ ವಂಚಕರ ದಾಹ ತೀರದೇ, ಮೇ 2ರಂದು ಮಹಿಳೆ ತಮ್ಮ ಸಹೋದರರ ಬಳಿ ಮತ್ತಷ್ಟು ಹಣ ಕೇಳಿದಾಗ ಅನುಮಾನ ಮೂಡಿದೆ. ಬಳಿಕ ವಿಚಾರಣೆ ನಡೆಸಿದಾಗ ಇದು ಡಿಜಿಟಲ್ ಅರೆಸ್ಟ್ ವಂಚನೆ ಎಂಬುದು ಬೆಳಕಿಗೆ ಬಂದಿದೆ. ಆ ನಂತರ ಸಂತ್ರಸ್ತರು 1930 ಸೈಬರ್ ಸಹಾಯವಾಣಿ ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.