ನವದೆಹಲಿ, ಏ. 18 (DaijiworldNews/AA): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗೆ ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಾದ ಮೂರನೇ ಎರಡರಷ್ಟು ಬಹುಮತ ಪಡೆಯಲು ಲೋಕಸಭೆಯಲ್ಲಿ ವಿಫಲವಾದ ಬೆನ್ನಲ್ಲೇ, ಮೂಲ ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೆ ಮಂಡಿಸುವಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಶೇಷ ಅಧಿವೇಶನದ ಅಂತಿಮ ದಿನವಾದ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದೆ ಎಲ್ಲಾ ರಾಜಕೀಯ ಪಕ್ಷಗಳಿಂದ ಒಮ್ಮತದಿಂದ ಸ್ವೀಕರಿಸಿದ್ದ ಮಸೂದೆಯನ್ನು ಮರಳಿ ತನ್ನಿ. ಎಲ್ಲಾ ಪಕ್ಷಗಳಿಂದ ಅಂಗೀಕರಿಸಲ್ಪಟ್ಟ ಹಳೆಯ ಮಹಿಳಾ ಮಸೂದೆಯನ್ನು ಸೋಮವಾರವೇ ಕೇಂದ್ರ ಸರ್ಕಾರ ಮಂಡಿಸಬೇಕು" ಎಂದು ಹೇಳಿದ್ದಾರೆ.
"ಸೋಮವಾರ ಸಂಸತ್ ಅಧಿವೇಶನ ನಡೆಸಿ ಹಳೆಯ ಮಸೂದೆಯನ್ನು ತನ್ನಿ ಯಾರು ಮಹಿಳಾ ವಿರೋಧಿ ಎಂಬುದನ್ನು ನೋಡೋಣ. ನಾವೆಲ್ಲರೂ ಮತ ಚಲಾಯಿಸುತ್ತೇವೆ ಮತ್ತು ನಿಮ್ಮನ್ನು ಬೆಂಬಲಿಸುತ್ತೇವೆ" ಎಂದು ತಿಳಿಸಿದರು.