ನವದೆಹಲಿ, ಏ. 18 (DaijiworldNews/AA): ಇನ್ಮುಂದೆ ಯುಪಿಐ ಮೂಲಕ 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ಹಣ ತಕ್ಷಣ ಕಡಿತವಾಗುವುದಿಲ್ಲ. ಬದಲಿಗೆ ಒಂದು ಗಂಟೆ ಬಳಿಕ ಕಡಿತವಾಗುವಂತೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಮುಂದಾಗಿದೆ.

ಡಿಜಿಟಲ್ ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಆರ್ಬಿಐ ಮುಂದಾಗಿದೆ. 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ತಕ್ಷಣ ದುಡ್ಡು ಕಡಿತವಾಗುವುದಿಲ್ಲ. ಬದಲಿಗೆ ಆ ಹಣವನ್ನು ಬ್ಯಾಂಕ್ ಒಂದು ಗಂಟೆಗಳ ಕಾಲ ಹಿಡಿದಿಟ್ಟುಕೊಂಡು, ಬಳಿಕ ಕಡಿತವಾಗುತ್ತದೆ. ಒಂದು ವೇಳೆ ತಪ್ಪಾಗಿ ಅಥವಾ ಗೊತ್ತಿಲ್ಲದೆ ಹಣ ವರ್ಗಾವಣೆಯಾಗಿದ್ದರೆ ಒಂದು ಗಂಟೆಯ ಕಾಲವಕಾಶದ ಒಳಗೆ ಈ ಪಾವತಿಯನ್ನು ರದ್ದು ಮಾಡಲು ಗ್ರಾಹಕರಿಗೆ ಅವಕಾಶ ಸಿಗುತ್ತದೆ.
ಇನ್ನೂ ಈ ಹೊಸ ನಿಯಮದಿಂದ ನಿತ್ಯದ ಪಾವತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಂದರೆ ಅಂಗಡಿಗಳಲ್ಲಿ ಖರೀದಿಯ ಮೇಲಿನ ಪಾವತಿಗಳು, ಇಎಂಐಗಳು, ಮ್ಯೂಚುವಲ್ ಫಂಡ್ ಎಸ್ಐಪಿ, ಎಲ್ಐಸಿ ಪ್ರೀಮಿಯಂ ಕಡಿತಗಳು, ಸಬ್ಸ್ಕ್ರಿಪ್ಪನ್ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅನುಮಾನಾಸ್ಪದ ಹಾಗೂ ಹೊಸ ವರ್ಗಾವಣೆಗಳಿಗೆ ಇದು ಅನ್ವಯವಾಗಲಿದೆ ಎನ್ನಲಾಗಿದೆ.