ಬೆಂಗಳೂರು, ಏ. 18 (DaijiworldNews/TA): ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಿ ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳನ್ನು ಬೆಂಗಳೂರಿಗೆ ತರಲಾಗಿದ್ದು, ಅವುಗಳನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಕಲ್ಬುರ್ಗಿಯ ಕಾರ್ಯಕ್ರಮ ಮುಗಿಸಿ ಹೈದರಾಬಾದ್ ಮೂಲಕ ಬೆಂಗಳೂರಿಗೆ ಆಗಮಿಸಿದ ಸಚಿವರು, ನೇರವಾಗಿ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಚೀತಾಗಳನ್ನು ಪರಿಶೀಲಿಸಿದರು. ಬಳಿಕ ಅವುಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಜೀವ ವೈವಿಧ್ಯ ಉದ್ಯಾನಕ್ಕೆ ಸಾಗಿಸುವ ವ್ಯವಸ್ಥೆಯನ್ನು ಸಮೀಕ್ಷೆ ಮಾಡಿದರು.
ಚೀತಾಗಳಿಗೆ ಹೊಸ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವಲ್ಲಿ ಯಾವುದೇ ತೊಂದರೆ ಆಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 30 ದಿನಗಳ ಕ್ವಾರಂಟೈನ್ ವ್ಯವಸ್ಥೆ, ನಿಯೋಜಿತ ಆಹಾರ ಪೂರೈಕೆ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪಶುವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಒಮ್ಮೆ ಕರ್ನಾಟಕದ ಕಾಡುಗಳಲ್ಲಿ ಕಂಡುಬಂದಿದ್ದ ಚೀತಾಗಳು ಈಗ ಸಂಪೂರ್ಣವಾಗಿ ಅಳಿದುಹೋಗಿವೆ. ಕನಿಷ್ಠ ಮೃಗಾಲಯಗಳಲ್ಲಾದರೂ ಜನತೆಗೆ ಈ ಅಪರೂಪದ ಪ್ರಾಣಿಗಳನ್ನು ನೋಡುವ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಜೊತೆಗೆ ಚೀತಾಗಳ ಸಂರಕ್ಷಣೆ ಮತ್ತು ಸುರಕ್ಷತೆಗೆ ಅತ್ಯಂತ ಆದ್ಯತೆ ನೀಡುವಂತೆ ಮೃಗಾಲಯ ಪ್ರಾಧಿಕಾರಕ್ಕೂ ಸೂಚನೆ ನೀಡಿದ್ದಾರೆ.
ಭಾರತದಲ್ಲಿ ಚೀತಾಗಳ ಪುನರ್ ಸ್ಥಾಪನೆ ಪ್ರಯತ್ನಗಳು ಹೊಸದೇನಲ್ಲ. 2022ರಲ್ಲಿ ಕೇಂದ್ರ ಸರ್ಕಾರದ ‘ಪ್ರಾಜೆಕ್ಟ್ ಚೀತಾ’ ಯೋಜನೆಯಡಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ಆದರೆ ಹವಾಮಾನ ವೈಪರೀತ್ಯ, ಚರ್ಮದ ಸೋಂಕು ಹಾಗೂ ಪರಸ್ಪರ ಕಾಳಗಗಳಿಂದಾಗಿ ಹಲವಾರು ಚೀತಾಗಳು ಮೃತಪಟ್ಟಿದ್ದವು.
ಈ ಹಿಂದೆ ಎದುರಾದ ಸವಾಲುಗಳಿಂದ ಪಾಠ ಕಲಿತಿರುವ ಕರ್ನಾಟಕ ಅರಣ್ಯ ಇಲಾಖೆ, ಬನ್ನೇರುಘಟ್ಟದಲ್ಲಿ ಚೀತಾಗಳ ಆರೈಕೆ ಮತ್ತು ಸಂರಕ್ಷಣೆಗೆ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.