ನವದೆಹಲಿ, ಏ. 18 (DaijiworldNews/AK):ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾದ ಕಾರಣದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಇದು ವಿರೋಧ ಪಕ್ಷದ ವಿರುದ್ಧ ಬಿಜೆಪಿ ಸರ್ಕಾರದ ಆಕ್ರೋಶಕ್ಕೆ ಕಾರಣವಾಯಿತು.

ಈ ಮಸೂದೆಯೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಪ್ರತಿಪಾದಿಸಿದ ಗೃಹ ಸಚಿವ ಅಮಿತ್ ಶಾ, ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಇಂ ಲೋಕಸಭೆಯಲ್ಲಿ ನಡೆದಿದ್ದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ನಾರಿ ಶಕ್ತಿ ವಂದನ ಕಾಯ್ದೆಗೆ ಬೇಕಿದ್ದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ಸೇರಿ ಸೋಲಿಸಿಬಿಟ್ಟವು. ಮಹಿಳೆಯರಿಗೆ ಸಿಗಬೇಕಿದ್ದ ಶೇ. 33ರಷ್ಟು ಮೀಸಲಾತಿಗೆ ಅಡ್ಡಗಾಲು ಹಾಕಿದರು. ಆ ಮಸೂದೆ ಸೋಲುತ್ತಿದ್ದಂತೆ ಅದನ್ನು ಅವರು ಸಂಭ್ರಮಿಸಿದ್ದು, ಜೈಕಾರ ಹಾಕಿದ್ದು ನೋಡಿದರೆ ತುಂಬಾನೇ ಬೇಸರ ಆಗುತ್ತದೆ.
ನಮ್ಮ ದೇಶದ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸಿಗಬೇಕಿದ್ದ ಮೀಸಲಾತಿ ಹಕ್ಕು ಕೈತಪ್ಪಿ ಹೋಗಿದೆ. ಕಾಂಗ್ರೆಸ್ ಮತ್ತು ಅವರ ಮಿತ್ರಪಕ್ಷಗಳು ಈ ರೀತಿ ಮಾಡ್ತಿರೋದು ಇದೇ ಮೊದಲೇನಲ್ಲ. ಇವರ ಇಂಥ ಬುದ್ಧಿ ಮಹಿಳೆಯರಿಗೂ ಒಳ್ಳೆಯದಲ್ಲ, ದೇಶಕ್ಕೂ ಒಳ್ಳೆಯದಲ್ಲ. ವಿರೋಧ ಪಕ್ಷದವರ ವಿರುದ್ಧ ಮಹಿಳೆಯರ ಸಿಟ್ಟು ಹೇಗಿರುತ್ತದೆ ಎಂಬುದನ್ನು 2029ರ ಲೋಕಸಭೆ ಚುನಾವಣೆಯಲ್ಲಿ ಅಷ್ಟೇ ಅಲ್ಲ, ಮುಂದಿನ ಪ್ರತಿ ಚುನಾವಣೆಯಲ್ಲೂ ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿ 298 ಸದಸ್ಯರು ಮತ ಚಲಾಯಿಸಿದರೆ, 230 ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರು. ಸದನದಲ್ಲಿ ಮತದಾನದ ಸಮಯದಲ್ಲಿ 2/3 ಬಹುಮತವನ್ನು ಸಾಧಿಸದ ಕಾರಣ ಸಂವಿಧಾನ (131 ನೇ ತಿದ್ದುಪಡಿ) ತಿದ್ದುಪಡಿ ಮಸೂದೆ ಅಂಗೀಕಾರವಾಗಲಿಲ್ಲ” ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.