ನವದೆಹಲಿ, ಏ. 18 (DaijiworldNews/AK): ಜಾಗತಿಕ ವಾಣಿಜ್ಯ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸಿರುವುದು ಭಾರತದ ತೈಲ ಕಂಪನಿಗಳು, ರಸಗೊಬ್ಬರ ಉತ್ಪಾದಕರು ಮತ್ತು ರಫ್ತುದಾರರ ಸಂತೋಷಕ್ಕೆ ಕಾರಣವಾಗಿದೆ.

ಭಾರತ ಹಾಗೂ ವಿದೇಶದ 41 ಹಡಗುಗಳು ಭರ್ತಿಯಾಗಿ, ಅಗಲ ಕಿರಿದಾದ ಹಾರ್ಮುಝ್ ಜಲಸಂಧಿಯನ್ನು ದಾಟಲು ಕಾಯುತ್ತಿವೆ. ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ಆರಂಭಿಸಿದ ಬಳಿಕ ಇರಾನ್ ಈ ಜಲಸಂಧಿಯಲ್ಲಿ ಸಂಚಾರ ನಿರ್ಬಂಧಗೊಳಿಸಿತ್ತು.
ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಮುನ್ನ ಭಾರತದ ಕೃಷಿಕ್ಷೇತ್ರಕ್ಕೆ ಅಗತ್ಯವಾಗಿರುವ ರಸಗೊಬ್ಬರವನ್ನು ಹೊತ್ತಿರುವ 12ಕ್ಕೂ ಹೆಚ್ಚು ಹಡಗುಗಳು ಜಲಸಂಧಿ ದಾಟಲು ಕಾಯುತ್ತಿವೆ. ಹಾರ್ಮುಝ್ ನ ಪಶ್ಚಿಮದಲ್ಲಿ ಕಾಯುತ್ತಿರುವ ಹಡಗುಗಳಲ್ಲಿ 15 ಭಾರತೀಯ ಹಡಗುಗಳಾಗಿದ್ದರೆ, ಉಳಿದ 26 ವಿದೇಶಿ ಹಡಗುಗಳಾಗಿವೆ. ಈ ಪೈಕಿ 10 ಕಚ್ಚಾ ತೈಲದ ಹಡಗುಗಳು, ನಾಲ್ಕು ಎಲ್ಪಿಜಿ ಟ್ಯಾಂಕರ್ಗಳು ಮತ್ತು ಮೂರು ಎಲ್ಎನ್ಜಿ ಒಯ್ಯುವ ಹಡಗುಗಳು ಸೇರಿವೆ ಎಂದು ತಿಳಿದುಬಂದಿದೆ.