ಮೊಹಾಲಾ, ಏ. 18 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಕೆಲವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಲು ಸಫಲರಾದರೆ, ಇನ್ನು ಕೆಲವರು ಹಲವು ಪ್ರಯತ್ನಗಳ ನಂತರ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಿಯಾ ಕೌರ್ ಸೇಥಿ ಅವರ ಯಶೋಗಾಥೆ ಇದು.

ದೆಹಲಿ ವಿಶ್ವವಿದ್ಯಾಲಯದ ಖಾಲ್ಸಾ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ರಿಯಾ, ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ 'ಡೆವಲಪ್ಮೆಂಟ್ ಸ್ಟಡೀಸ್'ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಯುಪಿಎಸ್ಸಿ ಮುಖ್ಯ ಪರೀಕ್ಷೆಗೆ ಅವರು ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡಿದ್ದರು.
ತಯಾರಿಯ ಸಮಯದಲ್ಲಿ ದಿನಕ್ಕೆ 10 ಗಂಟೆಗಳ ಕಾಲ ರಿಯಾ ಓದುತ್ತಿದ್ದರು. ಹಿಂದಿನ ಮೂರು ಪ್ರಯತ್ನಗಳಲ್ಲಿ ಸೋಲನ್ನು ಕಂಡಿದ್ದ ರಿಯಾ, ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಅಖಿಲ ಭಾರತ 89ನೇ ರ್ಯಾಂಕ್ ಪಡೆದು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಮೂಲಕ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡರು.
"ಪ್ರತಿಯೊಬ್ಬ ಹೆಣ್ಣುಮಗಳು ಇಂದು ನಾನು ನಿಂತಿರುವ ಸ್ಥಾನದಲ್ಲಿ ನಿಲ್ಲುವಂತಾಗಬೇಕು. ಅಧಿಕಾರಿಗಳನ್ನು ತಲುಪಲು ಸಾಧ್ಯವಾಗದವರ ಧ್ವನಿಯಾಗಿ ಕೆಲಸ ಮಾಡುವುದು ಮತ್ತು ಸರ್ಕಾರದ ಯೋಜನೆಗಳು ಅವರಿಗೆ ತಲುಪುವಂತೆ ಮಾಡುವುದು ನನ್ನ ಗುರಿ" ಎಂದು ರಿಯಾ ಅವರು ಹೇಳಿದ್ದಾರೆ.