ಬೆಂಗಳೂರು, ಏ. 17 (DaijiworldNews/AA): ಮಾರುಕಟ್ಟೆಯಲ್ಲಿ ಮಾವು, ಬಾಳೆಹಣ್ಣು ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ನಂತಹ ಅಪಾಯಕಾರಿ ರಾಸಾಯನಿಕವನ್ನು ಬಳಕೆ ಮಾಡುತ್ತಿರುವ ಹಿನ್ನಲೆ ಎಫ್ಎಸ್ಎಸ್ಎಐ(FSSAI) ಆತಂಕ ವ್ಯಕ್ತಪಡಿಸಿದೆ.

ಕಾಯಿ ಬೇಗನೆ ಹಣ್ಣಾಗಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡಲಾಗುತ್ತಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಕಟ್ಟುನಿಟ್ಟಿನ ತಪಾಸಣೆ ನಡೆಸಿ, ಕಾನೂನುಬಾಹಿರವಾಗಿ ಹಣ್ಣು ಮಾಡುವ ಏಜೆಂಟ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಆದೇಶ ನೀಡಿದೆ.
ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಸಾಕಷ್ಟು ಆರೋಗ್ಯ ಸಮಸ್ಯೆಯಾಗಳು ಉಂಟಾಗುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯಿಂದ ಚರ್ಮದ ಅಲ್ಸರ್, ವಾಂತಿ, ಗಂಟಲು ನೋವಿನಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ. ಹೀಗಾಗಿ ಈ ರಾಸಾಯನಿಕಗಳನ್ನು ಬಳಸುತ್ತಿರುವುದರ ವಿರುದ್ಧ ಎಫ್ಎಸ್ಎಸ್ಎಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಎಫ್ಎಸ್ಎಸ್ಎಐಯಿಂದ ಎಲ್ಲಾ ರಾಜ್ಯದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹಣ್ಣುಗಳಿಗೆ ಕೆಮಿಕಲ್ ಬಳಕೆಯ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಎಲ್ಲಾ ಹಣ್ಣಿನ ಮಂಡಿಗಳು, ವರ್ತಕರು, ದಾಸ್ತಾನು ಮಳಿಗೆಗಳಿಗೆ ದಾಳಿ ನಡೆಸಿ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿರುವ ಅಧಿಕಾರಿಗಳು, ಕೃತಕ ವಿಧಾನಕ್ಕೆ ಬದಲಾಗಿ ನೈಸರ್ಗಿಕ ಅಥವಾ ಸುರಕ್ಷಿತವಾದ ಎಥಿಲೀನ್ ಅನಿಲವನ್ನು ನಿಯಮಿತ ಪ್ರಮಾಣದಲ್ಲಿ ಬಳಸಲು ಪ್ರೋತ್ಸಾಹಿಸುವಂತೆ ತಿಳಿಸಿದ್ದಾರೆ.
ಹಣ್ಣುಗಳನ್ನು ಖರೀದಿಸುವಾಗ ಗ್ರಾಹಕರು ಸಹ ಜಾಗರೂಕರಾಗಿರಬೇಕು ಮತ್ತು ಅಸಹಜ ಬಣ್ಣ ಅಥವಾ ವಾಸನೆಯಿರುವ ಹಣ್ಣುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ. ನಿಯಮ ಉಲ್ಲಂಘಿಸುವ ಮಾರಾಟಗಾರರ ವಿರುದ್ಧ ದಂಡ ಮತ್ತು ಪರವಾನಗಿ ರದ್ದತಿಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.