ನವದೆಹಲಿ, ಏ. 17 (DaijiworldNews/AA): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗೆ ಇಂದು ಲೋಕಸಭೆಯಲ್ಲಿ ಸೋಲಾಗಿದೆ. ಈ ಮಸೂದೆಗೆ ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಾದ ಮೂರನೇ ಎರಡರಷ್ಟು ಬಹುಮತ ಸಿಗದ ಹಿನ್ನೆಲೆಯಲ್ಲಿ 2 ಬಿಲ್ಗಳನ್ನೂ ಸರ್ಕಾರ ಹಿಂಪಡೆದಿದೆ.

ಮಹಿಳಾ ಮೀಸಲಾತಿ ಕಾಯ್ದೆಗೆ 131ನೇ ತಿದ್ದುಪಡಿ ತರುವ ಮೂಲಕ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಮತದಾನದ ಮೂಲಕ ಮಸೂದೆ ಅಂಗೀಕರಿಸಲು ನಿರ್ಧರಿಸಲಾಗಿತ್ತು. ಆದರೆ ಈ ಮಸೂದೆಗೆ 3ನೇ ಎರಡರಷ್ಟು ಬಹುಮತ ಸಿಗದೆ ಬಿಲ್ ಸೋಲು ಕಂಡಿದೆ.
ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ 326 ಮತಗಳ ಅಗತ್ಯವಿತ್ತು. ಆದರೆ ಲೋಕಸಭೆಯ 543 ಸದಸ್ಯರ ಪೈಕಿ 489 ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು. ಮಸೂದೆಯ ಪರವಾಗಿ 298 ಸದಸ್ಯರು, ವಿರುದ್ಧವಾಗಿ 230 ಸದಸ್ಯರು ಚಲಾಯಿಸಿದ್ರು. ಕೊನೆಗೆ 54 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಯಿತು.
ಇನ್ನು ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಮರುವಿಂಗಡಣೆ ಬಗ್ಗೆ ಚರ್ಚೆ ಸಂಬಂಧ ಲೋಕಸಭೆಯಲ್ಲಿ ಉತ್ತರಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, "ಯಾರೂ ಕೂಡ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಲ್ಲ. ಎಲ್ಲರೂ ಕೂಡ ಸ್ವಾಗತ ಮಾಡಿದ್ದಾರೆ. ಆದ್ರೆ, ಇಂಡಿಯಾ ಮೈತ್ರಿಕೂಟ ಪರೋಕ್ಷವಾಗಿ ಅದನ್ನು ವಿರೋಧಿಸಿದೆ. ಅವರ ವಿರೋಧ ತಿದ್ದುಪಡಿಗಳಿಗೆ ಅಲ್ಲ. ಬದಲಾಗಿ ಮಹಿಳಾ ಮೀಸಲಾತಿಗೇ ಪ್ರತಿಪಕ್ಷ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಹೀಗಾಗಿ ವಿರೋಧ ಪಕ್ಷದವರು ಮಹಿಳಾ ವಿರೋಧಿ ಮನಸ್ಥಿತಿಯವರು" ಎಂದು ವಾಗ್ದಾಳಿ ನಡೆಸಿದ್ದಾರೆ.
ಎನ್ಡಿಎ ನಾಯಕರಿಂದ ಪ್ರತಿಭಟನೆ
ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಸಂವಿಧಾನ ಮಸೂದೆಗೆ ಲೋಕಸಭೆಯಲ್ಲಿ ಬಹುಮತ ಸಿಗದ ಹಿನ್ನೆಲೆ ಸಂಸತ್ತಿನ ಆವರಣದಲ್ಲಿ ಎನ್ಡಿಎ ನಾಯಕರು ಪ್ರತಿಭಟನೆ ನಡೆಸಿದ್ದಾರೆ.