ಬೆಂಗಳೂರು, ಮಾ. 23 (DaijiworldNews/TA): ನಗರದ ಅನಿಲ್ ಕುಂಬ್ಳೆ ವೃತ್ತ ಬಳಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಹೆಸರು ಕೇಳಿಬಂದಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ರಿಕ್ಕಿ ರೈ ವಿರುದ್ಧದ ಎಫ್ಐಆರ್ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇತ್ತ ರಿಕ್ಕಿ ರೈ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ನಿಂದ ಜಾಮೀನು ಪಡೆದುಕೊಂಡಿದ್ದಾರೆ.

ಡ್ರಿಫ್ಟಿಂಗ್ ವಿಡಿಯೋ ವೈರಲ್ : ಮಾರ್ಚ್ 21ರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಕೆಎ-05, ಎನ್ಆರ್-0009 ನಂಬರಿನ ಲ್ಯಾಂಬೋರ್ಗಿನಿ ಕಾರು ಶಿವಾಜಿನಗರ ದಿಕ್ಕಿನಿಂದ ಅನಿಲ್ ಕುಂಬ್ಳೆ ವೃತ್ತಕ್ಕೆ ಅತಿ ವೇಗವಾಗಿ ಬಂದಿದೆ. ಬಳಿಕ ಕಾರು ಚಾಲಕ ಅದೇ ವೃತ್ತದಲ್ಲಿ ಕಾರನ್ನು ಎರಡು ಸುತ್ತು ವೇಗವಾಗಿ ಡ್ರಿಫ್ಟ್ ಮಾಡಿ, ನಂತರ ಮತ್ತೆ ಶಿವಾಜಿನಗರ ಕಡೆಗೆ ಶರವೇಗದಲ್ಲಿ ತೆರಳಿದ್ದಾನೆ.
ಈ ಅಪಾಯಕಾರಿ ಚಾಲನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾರು ಸಂಚರಿಸಿದ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ರಿಕ್ಕಿ ರೈ ಸ್ವತಃ ವಾಹನ ಚಲಾಯಿಸುತ್ತಿರುವುದು ಕಂಡುಬಂದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಸಂಬಂಧ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ IMV 184, 189 ಮತ್ತು BNS 281 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ರಿಕ್ಕಿ ರೈ ನಿರೀಕ್ಷಣಾ ಜಾಮೀನುಗಾಗಿ ಕೋರ್ಟ್ ಮೊರೆ ಹೋಗಿದ್ದರು.
ಇದೇ ವೇಳೆ, ಲ್ಯಾಂಬೋರ್ಗಿನಿ ಕಾರು ರಿಕ್ಕಿ ರೈ ಅವರದ್ದೇ ಎಂಬುದು ದೃಢಪಟ್ಟಿದ್ದು, ಸದಾಶಿವನಗರದಲ್ಲಿರುವ ಅವರ ನಿವಾಸದಿಂದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಕಾರು ಚಾಲನೆ ಮಾಡುತ್ತಿದ್ದವರು ಯಾರು ಎಂಬುದರ ಕುರಿತು ತನಿಖೆ ಮುಂದುವರಿದಿದೆ.