ಬೆಂಗಳೂರು, ಮಾ. 23 (DaijiworldNews/AA): ರಾಜ್ಯದಲ್ಲಿ ಹೆಚ್ಚುವರಿಯಾಗಿ 1,000 ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

ಗ್ಯಾಸ್ ಕಂಪನಿಗಳು ಮತ್ತು ಹೋಟೆಲ್ ಸಂಘದ ಜೊತೆ ಸಭೆ ನಡೆಸಿದ ಸಚಿವರು, "ರಾಜ್ಯದಲ್ಲಿ ಹೆಚ್ಚುವರಿಯಾಗಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಮಾಡಲಾಗುವುದು. ಹೆಚ್ಚುವರಿಯಾಗಿ 1,000 ಸಿಲಿಂಡರ್ ಸೇರಿಸಿ ಒಟ್ಟು 10,000 ಸಿಲಿಂಡರ್ ಪೂರೈಕೆ ಆಗಲಿದೆ. ಕಮರ್ಷಿಯಲ್ ಗ್ಯಾಸ್ ಬಳಕೆದಾರರು ಕಡ್ಡಾಯವಾಗಿ ರಿಜಿಸ್ಟರ್ ಮಾಡಿಸಬೇಕು. ಗೇಲ್ ಕಂಪನಿಗೆ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯ. ಒಂದು ವಾರದೊಳಗೆ ರಿಜಿಸ್ಟರ್ ಮಾಡಬೇಕು. ಅಕ್ರಮ ತಡೆಯಲು ಈ ಕ್ರಮಕೈಗೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.
"10,000 ಸಿಲಿಂಡರ್ನಲ್ಲಿ ಕಮರ್ಷಿಯಲ್ ಗ್ಯಾಸ್ ವ್ಯಾಪ್ತಿಗೆ ಬರುವ ಎಲ್ಲಾ ವಲಯಕ್ಕೆ ಹಂಚಿಕೆ ಆಗುತ್ತೆ. ಅದರಲ್ಲಿ ಹೋಟೆಲ್, ಇಂದಿರಾ ಕ್ಯಾಂಟೀನ್, ಪಿಜಿ ಇನ್ನಿತರ ವಲಯಕ್ಕೂ ಹಂಚಿಕೆಯಾಗಲಿದೆ. ಮುಂದಿನ ಸೋಮವಾರ ಮತ್ತೆ ಹೋಟೆಲ್ ಮಾಲೀಕರ ಜತೆ ಸಭೆ ಮಾಡಲಾಗುವುದು. ಕಳೆದ ವಾರ ಒಂದು ಸಾವಿರ ಸಿಲಿಂಡರ್ ಹೋಟೆಲ್ಗೆ ನೀಡಲಾಗುತ್ತಿತ್ತು. ಸದ್ಯ ಹೋಟೆಲ್, ಡಾಬಾ, ಹಾಸ್ಟೆಲ್, ಇಂದಿರಾ ಕ್ಯಾಂಟೀನ್ಗೆ ನೀಡಲಾಗುವುದು" ಎಂದು ತಿಳಿಸಿದರು.
"ಇನ್ಮುಂದೆ ಕಮರ್ಷಿಯಲ್ ಸಿಲಿಂಡರ್ ಬಳಕೆ ಮಾಡುವವರಿಗೆ ನೋಂದಣಿ ಕಡ್ಡಾಯ. ಗೇಲ್ ಕಂಪನಿ ಜತೆ ನೋಂದಣಿ ಮಾಡಬೇಕು. ನೋಂದಣಿ ಮಾಡಿಕೊಳ್ಳಲಿಲ್ಲ ಅಂದ್ರೆ ಕಮರ್ಷಿಯಲ್ ಗ್ಯಾಸ್ ಸಿಗಲ್ಲ. ಯಾರು ಎಷ್ಟು ಬಳಕೆ ಮಾಡ್ತಿದ್ದಾರೆ ಎನ್ನುವುದರ ಮಾಹಿತಿ ಸಿಗಲಿದೆ. ಮುಂದಿನ ಶನಿವಾರದೊಳಗೆ ನೋಂದಣಿ ಕಡ್ಡಾಯ" ಎಂದರು.