ಪಾಟ್ನಾ, ಮಾ. 05 (DaijiworldNews/AA): ಬಿಹಾರ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಿದ್ದು, 20 ವರ್ಷಕ್ಕಿಂತ ಹೆಚ್ಚು ಕಾಲ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿ ರಾಜ್ಯಸಭೆಗೆ ಸೇರುವುದಾಗಿ ದೃಢಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ನನ್ನ ರಾಜಕೀಯ ಜೀವನದ ಆರಂಭದಿಂದಲೇ ಬಿಹಾರ ವಿಧಾನಮಂಡಲದ ಎರಡೂ ಸದನಗಳಲ್ಲೂ ಹಾಗೂ ಭಾರತದ ಸಂಸತ್ತಿನ ಎರಡೂ ಸದನಗಳಲ್ಲೂ ಸದಸ್ಯನಾಗಬೇಕೆಂಬ ಆಸೆ ನನ್ನ ಮನಸ್ಸಿನಲ್ಲಿ ಇತ್ತು. ನನ್ನ ಆಸೆಯಂತೆ ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಸಭೆ ಸದಸ್ಯನಾಗಲು ಬಯಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
75 ವರ್ಷದ ಹಿರಿಯ ನಾಯಕ ನಿತೀಶ್ ಕುಮಾರ್, ಕಳೆದ ವರ್ಷದ ನವೆಂಬರ್ನಲ್ಲಿ ದಾಖಲೆ ೧೦ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯದ ಜನರು ನಿರಂತರವಾಗಿ ತಮಗೆ ವಿಶ್ವಾಸ ತೋರಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
"ಎರಡು ದಶಕಕ್ಕೂ ಹೆಚ್ಚು ಕಾಲ ನೀವು ನನ್ನ ಮೇಲೆ ನಿರಂತರವಾಗಿ ವಿಶ್ವಾಸ ಮತ್ತು ಬೆಂಬಲವನ್ನು ತೋರಿದ್ದೀರಿ. ಆ ವಿಶ್ವಾಸದ ಶಕ್ತಿಯಿಂದಲೇ ನಾವು ಬಿಹಾರ ಜನರಿಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದ್ದೇವೆ. ನಿಮ್ಮ ವಿಶ್ವಾಸ ಮತ್ತು ಬೆಂಬಲದ ಕಾರಣದಿಂದಲೇ ಇಂದು ಬಿಹಾರ ಅಭಿವೃದ್ಧಿ ಮತ್ತು ಗೌರವದ ಹೊಸ ದಿಕ್ಕನ್ನು ಕಾಣುತ್ತಿದೆ" ಎಂದು ಹೇಳಿದ್ದಾರೆ.
ಜೆಡಿಯು ಮುಖ್ಯಸ್ಥರೂ ಆಗಿರುವ ನಿತೀಶ್ ಕುಮಾರ್ ಅವರು, ಮುಂದೆಯೂ ರಾಜ್ಯದ ಜನರೊಂದಿಗೆ ತಮ್ಮ ಸಂಬಂಧ ಮುಂದುವರಿಯಲಿದೆ ಹಾಗೂ ಹೊಸ ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದಾಗಿ ಬರೆದುಕೊಂಡಿದ್ದಾರೆ.
"ನಿಮ್ಮೊಂದಿಗೆ ನನ್ನ ಸಂಬಂಧ ಮುಂದೆಯೂ ಮುಂದುವರಿಯುತ್ತದೆ. ಅಭಿವೃದ್ಧಿ ಬಿಹಾರ ನಿರ್ಮಾಣಕ್ಕೆ ನಿಮ್ಮೊಂದಿಗಿನ ನಮ್ಮ ಪ್ರಯತ್ನ ಅಚಲವಾಗಿರುತ್ತದೆ. ಹೊಸದಾಗಿ ರೂಪುಗೊಳ್ಳುವ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ" ಎಂದಿದ್ದಾರೆ.