ಶ್ರೀನಗರ, ಮಾ. 04 (DaijiworldNews/AA): ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕಾಶ್ಮೀರಿ ಸಂಸದರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ದಾರಿತಪ್ಪಿಸುವ ವಿಷಯವನ್ನು ಹಂಚಿಕೊಂಡಿರುವ ಹಿನ್ನೆಲೆ ಶ್ರೀನಗರ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮತ್ತು ವಿಶ್ವಾದ್ಯಂತ ಶಿಯಾ ಮುಸ್ಲಿಮರು ಆರಾಧಿಸುವ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ವಿಚಾರದಲ್ಲಿ ಕೇಂದ್ರದ ನಡೆಯನ್ನು ಸಂಸದ ಟೀಕಿಸಿದ್ದಾರೆ. ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳು ಮತ್ತು ಸೋಮವಾರ ಭದ್ರತಾ ಸಿಬ್ಬಂದಿಯೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದ ಹಲ್ಲೆಯ ವೀಡಿಯೊಗಳನ್ನು ಮೆಹದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಭಯ ಮೂಡಿಸುವ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ, ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು, ಕೃತ್ರಿಮ ಮತ್ತು ದಾರಿತಪ್ಪಿಸುವ ವಿಷಯಗಳ ಪ್ರಸರಣದ ಬಗ್ಗೆ ಮಾಹಿತಿಯ ಆಧಾರದ ಮೇಲೆ ಶ್ರೀನಗರ ಸಂಸದ ಮತ್ತು ನಗರದ ಮಾಜಿ ಮೇಯರ್ ಜುನೈದ್ ಅಜೀಮ್ ಮಾಟೂ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ತಪ್ಪು ಮಾಹಿತಿಯನ್ನು ಹರಡುವ ಇಂತಹ ಉದ್ದೇಶಪೂರ್ವಕ ಪ್ರಯತ್ನಗಳು ಶಾಂತಿ, ಭದ್ರತೆ ಮತ್ತು ಒಟ್ಟಾರೆ ಸ್ಥಿರತೆಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.