ನವದೆಹಲಿ, ಮಾ. 04 (DaijiworldNews/TA): ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ದಾಳಿ-ಪ್ರತಿದಾಳಿ ಹಾಗೂ ಅಮೆರಿಕದ ಭಾಗವಹಿಸುವಿಕೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಪರಿಣಾಮವಾಗಿ ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ವಾಯುಪ್ರದೇಶಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಭಾರತದಿಂದ ಹಾಗೂ ಭಾರತಕ್ಕೆ ಹಲವು ವಿಮಾನಗಳ ಸಂಚಾರ ರದ್ದುಗೊಂಡಿದೆ.

ಈ ಹಿನ್ನೆಲೆದಲ್ಲಿ, ಆ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಇಂದು ಒಟ್ಟು 58 ವಿಶೇಷ ವಿಮಾನಗಳನ್ನು ಗಲ್ಫ್ ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮವಾಗಿ ಇದುವರೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳ 1,221 ವಿಮಾನಗಳು ಹಾಗೂ 388 ವಿದೇಶಿ ವಿಮಾನಯಾನ ಸೇವೆಗಳು ರದ್ದಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಅಗತ್ಯವಿರುವ ಕಡೆ ಹೆಚ್ಚುವರಿ ವಿಮಾನಗಳನ್ನು ನಿಯೋಜಿಸಲಾಗುತ್ತಿದೆ. ಟಿಕೆಟ್ ದರಗಳಲ್ಲಿ ಅನಗತ್ಯ ಏರಿಕೆಯಾಗದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಇಂಡಿಗೋ ಸಂಸ್ಥೆಯಿಂದ 30 ವಿಮಾನಗಳು, ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ನಿಂದ 23 ವಿಮಾನಗಳು ಸೇರಿ ಒಟ್ಟು 58 ವಿಮಾನಗಳು ಗಲ್ಫ್ ರಾಷ್ಟ್ರಗಳಿಗೆ ಹಾರಾಟ ನಡೆಸಲಿವೆ.
ಇದೇ ವೇಳೆ ಸ್ಪೈಸ್ ಜೆಟ್ ಯುಎಇಯಿಂದ 8 ವಿಶೇಷ ವಿಮಾನಗಳ ಹಾರಾಟ ನಡೆಸಲಿದೆ. ಈ ವಿಮಾನಗಳಲ್ಲಿ 4 ಅನ್ನು ದೆಹಲಿಗೆ, 3 ಅನ್ನು ಮುಂಬೈಗೆ ಹಾಗೂ 1 ವಿಮಾನವನ್ನು ಕೊಚ್ಚಿಗೆ ನಿಯೋಜಿಸಲಾಗಿದೆ. ಫೆಬ್ರವರಿ 28ರಿಂದ ಲಭ್ಯವಾದ ಅಂಕಿ-ಅಂಶಗಳ ಪ್ರಕಾರ, ಮಂಗಳವಾರ ಮಾತ್ರ ಭಾರತೀಯ ವಿಮಾನಯಾನ ಸಂಸ್ಥೆಗಳು 104 ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿವೆ. ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಿಲುಕಿರುವ ಪ್ರತಿಯೊಬ್ಬ ಭಾರತೀಯನನ್ನು ಸುರಕ್ಷಿತವಾಗಿ ಮರಳಿ ತರಲು ಕ್ರಮಗಳನ್ನು ಮುಂದುವರಿಸಿದೆ.