ಬೆಂಗಳೂರು, ಮಾ. 04 (DaijiworldNews/TA): ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ವೇಳೆ ರಾಜಧಾನಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು 2ನೇ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ 1ನೇ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಕಾಣೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪರೀಕ್ಷೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಎಕ್ಸಾಮ್ ಭಯದಿಂದ ಸೀನಿಯರ್ ವಿದ್ಯಾರ್ಥಿನಿ ತನ್ನ ಜೂನಿಯರ್ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ತನಿಷ್ಕಾ ತನ್ನ ಕೈ ಕತ್ತರಿಸಿಕೊಂಡಿದ್ದಳೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಈ ಬಾರಿಯೂ ಪರೀಕ್ಷೆ ಬರೆಯಲು ಇಚ್ಛಿಸದೆ ಈ ನಿರ್ಧಾರ ಕೈಗೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಣೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣವನ್ನು ತೆಗೆದುಕೊಂಡಿಲ್ಲವೆಂದು ತಿಳಿದುಬಂದಿದೆ. ಆಧಾರ್ ಕಾರ್ಡ್ ಮತ್ತು ಕಾಲೇಜು ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಿರುವ ಇವರಿಬ್ಬರೂ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಬಳಸಿಕೊಂಡಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿ ಮಲೆ ಮಹಾದೇಶ್ವರ ಬೆಟ್ಟದಲ್ಲಿದ್ದೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಒಂದು ವಾರದಲ್ಲಿ ಮತ್ತೆ ಸಂಪರ್ಕಿಸುವುದಾಗಿ ಹೇಳಿದ್ದರೂ, ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕರ್ನಾಟಕ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ. ಸುಮಾರು ಒಂದು ತಿಂಗಳಿಂದ ಮಕ್ಕಳಿಗಾಗಿ ಕಣ್ಣೀರಿಡುತ್ತಿರುವ ಕುಟುಂಬಸ್ಥರು, ಅವರು ಸುರಕ್ಷಿತವಾಗಿ ಮರಳಿ ಬರಲೆಂದು ಮನವಿ ಮಾಡಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.