ವಯನಾಡ್, ಮಾ. 04 (DaijiworldNews/TA): ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನಡೆಸುವ ನಾಗರಿಕ ಸೇವಾ ಪರೀಕ್ಷೆ ದೇಶದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದರೂ, ಕೆಲವರು ಮಾತ್ರ ಅಂತಿಮವಾಗಿ ಯಶಸ್ಸು ಸಾಧಿಸುತ್ತಾರೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ನಡೆಯುವ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು ತಮ್ಮ ಶ್ರೇಣಿಯ ಆಧಾರದ ಮೇಲೆ ಐಎಎಸ್, ಐಎಫ್ಎಸ್, ಐಆರ್ಎಸ್ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಪಡೆಯುತ್ತಾರೆ. ಈ ಕಠಿಣ ಪರೀಕ್ಷೆಯನ್ನು ಉತ್ತೀರ್ಣವಾಗಿ ಐಎಎಸ್ ಅಧಿಕಾರಿಯಾದ ಕೇರಳದ ಮೊದಲ ಬುಡಕಟ್ಟು ಮಹಿಳೆ ಶ್ರೀಧನ್ಯ ಸುರೇಶ್ ಅವರ ಜೀವನ ಕಥೆ ಇಂದು ಅನೇಕರಿಗೆ ಪ್ರೇರಣೆಯಾಗಿದೆ.

ಕೇರಳದ ವಯನಾಡು ಜಿಲ್ಲೆಯ ಕುರಿಚಿಯಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಶ್ರೀಧನ್ಯಾ ಸುರೇಶ್ ಬಾಲ್ಯದಲ್ಲೇ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು. ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಬೆಳೆದ ಅವರು ಸಂಪನ್ಮೂಲಗಳ ಕೊರತೆಯ ನಡುವೆಯೂ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಿದರು. ಕ್ಯಾಲಿಕಟ್ನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕ, ಕೋಝಿಕೋಡ್ನಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಶಿಕ್ಷಣ ಪೂರ್ಣಗೊಳಿಸಿದ ನಂತರ ಅವರು ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಹೆಚ್ಚುವರಿ ಆದಾಯಕ್ಕಾಗಿ ಬುಡಕಟ್ಟು ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ವಾರ್ಡನ್ ಆಗಿಯೂ ಸೇವೆ ಸಲ್ಲಿಸಿದರು. ಆದರೂ ತಮ್ಮ ಜೀವನದಲ್ಲಿ ಇನ್ನಷ್ಟು ಸಾಧಿಸಬೇಕೆಂಬ ಕನಸಿನಿಂದ ಅವರು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದರು. 2018ರಲ್ಲಿ ಅವರು ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು.
ಆದರೆ ಸಂದರ್ಶನ ದೆಹಲಿಯಲ್ಲಿ ನಡೆಯಬೇಕಾಗಿದ್ದರಿಂದ ಅಲ್ಲಿಗೆ ಹೋಗಲು ಅಗತ್ಯ ಹಣ ಅವರ ಬಳಿ ಇರಲಿಲ್ಲ. ಈ ಸಂದರ್ಭದಲ್ಲಿ ಸ್ನೇಹಿತರು ನೆರವಾಗಿದ್ದು, ಸುಮಾರು 40,000 ರೂಪಾಯಿಗಳನ್ನು ಸಂಗ್ರಹಿಸಿ ಅವರಿಗೆ ಸಹಾಯ ಮಾಡಿದರು. ಅಂತಿಮವಾಗಿ ಅವರು ಸಂದರ್ಶನದಲ್ಲಿ ಭಾಗವಹಿಸಿ, ಅಖಿಲ ಭಾರತ ಶ್ರೇಣಿಯಲ್ಲಿ 410ನೇ ಸ್ಥಾನ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ಸಾಧನೆಯೊಂದಿಗೆ ಶ್ರೀಧನ್ಯಾ ಸುರೇಶ್ ಕೇರಳದ ಮೊದಲ ಬುಡಕಟ್ಟು ಮಹಿಳಾ ಐಎಎಸ್ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದರು. ಅವರ ಹೋರಾಟ, ಪರಿಶ್ರಮ ಮತ್ತು ಸಂಕಲ್ಪ ಅನೇಕ ಯುವಕರಿಗೆ ದಾರಿದೀಪವಾಗಿದೆ.