ಬೆಂಗಳೂರು,ಫೆ. 07 (DaijiworldNews/AK): ಜನರು ಇನ್ನೂ ಕಳೆದ ಬಾರಿ ಮಾಡಿದ ಮೆಟ್ರೋ ದರ ಏರಿಕೆಯ ಬರೆಯಿಂದ ಚೇತರಿಸಿಕೊಳ್ಳುವ ಮೊದಲೇ ಎರಡನೇ ಬಾರಿ ಮೆಟ್ರೋ ದರ ಹೆಚ್ಚಿಸಲು ರಾಜ್ಯ ಸರಕಾರ, ಬಿಎಂಆರ್ಸಿಎಲ್ ಸಿದ್ಧವಾಗಿವೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಿಚಾರವನ್ನು ಕಳೆದ ಒಂದು ವರ್ಷದಿಂದ ಸತತವಾಗಿ ಬೆಲೆ ಏರಿಕೆ, ಮೆಟ್ರೋ ದುಬಾರಿ ಟಿಕೆಟ್ ವಿರುದ್ಧ ಸತತವಾಗಿ ಎತ್ತುತ್ತಿದ್ದೇನೆ. ರಾಜ್ಯ ಸರಕಾರವು ಪ್ರತಿ ಬಾರಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಇದು ನಮ್ಮದಲ್ಲ; ಕೇಂದ್ರ ಸರಕಾರ ಮಾಡಿರುವುದು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು ಮತ್ತು ರಾಜ್ಯದ ಜನರಿಗೆ ಈ ವಿಷಯದಲ್ಲಿ ಸತ್ಯಾಂಶ ತಿಳಿಯಬೇಕಿದೆ. ರಾಜ್ಯ ಸರಕಾರವು ದರ ನಿಗದಿ ಸಮಿತಿ (ಫೇರ್ ಫಿಕ್ಸೇಶನ್ ಕಮಿಟಿ) ರಚಿಸಲು ಒಂದಲ್ಲ; ಎರಡಲ್ಲ; 4 ಬಾರಿ ಕೇಂದ್ರಕ್ಕೆ ಪತ್ರ ಬರೆದ ನಂತರವೇ ಸಮಿತಿ ರಚಿಸಲಾಗಿದೆ. ಕೇಂದ್ರವು ತನಗೆ ಬೇಕಾದಂತೆ ಸಮಿತಿ ರಚಿಸಿ ಮೆಟ್ರೋ ದರ ಏರಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರಕಾರವು ಪದೇಪದೇ ಪತ್ರ ಬರೆದ ಕಾರಣ ಕೇಂದ್ರ ಸರಕಾರದ ದರ ನಿಗದಿ ಸಮಿತಿ ರಚಿಸಲಾಗಿದೆ. ಬಿಎಂಆರ್ಸಿಎಲ್ ಎಂದರೆ ಅದು ಕೇಂದ್ರ- ರಾಜ್ಯ ಸರಕಾರದ ಸ್ಪೆಷಲ್ ಪರ್ಪಸ್ ವೆಹಿಕಲ್. ಇದೊಂದು ಜಂಟಿ ಯೋಜನೆ. ರಾಜ್ಯ- ಕೇಂದ್ರ ಸರಕಾರದ ಮಧ್ಯದಲ್ಲಿ ಬಿಎಂಆರ್ಸಿಎಲ್ನ ಒಂದು ಎಂಒಯು ಇದೆ. ಅದರಡಿ ದರ ನಿಗದಿ ಎಂಬುದು ರಾಜ್ಯ ಸರಕಾರದ ಜವಾಬ್ದಾರಿ ಎಂದು ವಿವರಿಸಿದರು. ಹಿಂದೆ ಶೇ 71 ರಷ್ಟು ದರ ಏರಿಸಿದ್ದರಿಂದ ಕಳೆದ 8-10 ತಿಂಗಳಿನಿಂದ ಬೆಂಗಳೂರು ಮೆಟ್ರೋ ದೇಶದ ಎಲ್ಲ ಮೆಟ್ರೋಗಳಲ್ಲಿ ಅತಿ ದುಬಾರಿ ಮೆಟ್ರೋ ಎಂಬ ಕುಖ್ಯಾತಿಗೆ ಗುರಿಯಾಗಿದೆ ಎಂದು ಟೀಕಿಸಿದರು.