ಬಳ್ಳಾರಿ, ಜ.17 (DaijiworldNews/ AK): ಇವತ್ತು ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ಕೂರಿಸುವ ವಿಷಯದಲ್ಲಿ ಗಲಾಟೆ ಆಗಿದೆ. ಸಿದ್ದರಾಮಯ್ಯನವರೇ, ಕಾಂಗ್ರೆಸ್ ಸರಕಾರವು ವಾಲ್ಮೀಕಿ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.


ಬಿಜೆಪಿ ವತಿಯಿಂದ ಬಳ್ಳಾರಿಯಲ್ಲಿ ಇಂದು ಕಾಂಗ್ರೆಸ್ ಸರಕಾರದ ವಿರುದ್ಧ ಏರ್ಪಡಿಸಿದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಿದ್ದಾಗ ವಾಲ್ಮೀಕಿ ಜಯಂತಿ ರಜೆಯನ್ನು ಘೋಷಿಸಿದ್ದರು ಎಂದು ನೆನಪಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಯಡಿಯೂರಪ್ಪ ಅವರ ಬಳಿ ಶ್ರೀರಾಮುಲು ಅವರು ಹೇಳಿಕೊಂಡಿದ್ದರು. ಬಳಿಕ ವಾಲ್ಮೀಕಿ ಜಯಂತಿ ಘೋಷಿಸಿ ರಜೆಯನ್ನು ಕೊಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಿದ್ದರು ಎಂದು ಗಮನಕ್ಕೆ ತಂದರು.
ಶ್ರೀರಾಮುಲು, ಜನಾರ್ಧನ ರೆಡ್ಡಿಯವರು ಇಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಗಳಿದ್ದಾಗ ವಾಲ್ಮೀಕಿ ಸಮುದಾಯಕ್ಕೆ, ಪರಿಶಿಷ್ಟ ಪಂಗಡಕ್ಕೆ ಇದ್ದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಏರಿಸಿದ್ದರು ಎಂದು ವಿವರಿಸಿದರು.
ಆರೋಗ್ಯ ಸರಿ ಇಲ್ಲದಿದ್ದರೂ ಇಲ್ಲಿ ಈ ನಿರ್ಲಜ್ಜ ಕಾಂಗ್ರೆಸ್ ಸರಕಾರದ ವಿರುದ್ಧ ನಡೆಯುತ್ತಿರುವ ಈ ಹೋರಾಟದಲ್ಲಿ ಭಾಗವಹಿಸಲೇ ಬೇಕೆಂದು ಬಂದಿರುವುದಾಗಿ ತಿಳಿಸಿದರು.