ರಾಯಚೂರು,ಜ. 03 (DaijiworldNews/AK): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಕಾಯ್ದೆಯನ್ನು ಹೊಸ ಹೆಸರಲ್ಲಿ ಹೊಸ ಕಾಯ್ದೆಯೆಂದು ಘೋಷಿಸಿರುವ ಕೇಂದ್ರ ಸರ್ಕಾರ ಬಡವರು, ಮಹಿಳೆಯರು, ದಲಿತರು, ಸಣ್ಣ ರೈತರ ಬದುಕಿಗೆ ಬರೆ ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಶ್ರೀ ಅಂಬಾಮಠ ಆವರಣದಲ್ಲಿ ಆಯೋಜಿಸಲಾಗಿದ್ದ *ಶ್ರೀ ಅಂಬಾ ಮಹೋತ್ಸವ -2026 ಜಾತ್ರಾ ಮಹೋತ್ಸವ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲಬಾರಿಗೆ ಅಂಬಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ತಾಯಿಯ ದರ್ಶನವಾಗಿದ್ದು ನನ್ನ ಪುಣ್ಯ. ಇಂದು ಈ ಕ್ಷೇತ್ರದಲ್ಲಿ ಸಾಲಗುಂದಾ ಏತನೀರಾವರಿ ಮುಳ್ಳೂರು ಏತ ನೀರಾವರಿ ಮತ್ತು ವಳಬಳ್ಳಾರಿ ವಿಯರ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗಿದೆ.
ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ನಿಗಮಗಳು 176 ಕೋಟಿಗಳನ್ನು ಒದಗಿಸಲಾಗಿದೆ. ಸಾಲಗುಂದಾ ಏತ ನೀರಾವರಿಗೆ 71 ಕೋಟಿ, ಮಳ್ಳೂರುಏತ ನೀರಾವರಿಗೆ 21 ಕೋಟಿ, ಒಳಬಳ್ಳಾರಿ ಏತ ನೀರಾವರಿಗೆ 43 ಕ್ಕೂ ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ಹಂಪನಗೌಡ ಬಾದರ್ಲಿ ಅವರು ಈ ಕ್ಷೇತ್ರದ ಅಭಿವೃದ್ಧಿಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ನೀರಾವರಿಗೆ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರು ಒದಗಿಸುವ ಪ್ರಯತ್ನದಲ್ಲಿ 30 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗಿದೆ. ಉಳಿದ 12 ಲಕ್ಷ ಪ್ರದೇಶಕ್ಕೆ ನೀರು ಒದಗಿಸುವ ಕಾರ್ಯ ವಿವಿಧ ಹಂತಗಳಲ್ಲಿದೆ ಎಂದರು.
431 ಕೋಟಿಗಳನ್ನು ಪಾಪಯ್ಯ ಟನಲ್ ಮತ್ತು ಕಾಲುವೆ ಅಭಿವೃದ್ಧಿಗೆ ಹಾಗೂ ತುಂಗಭದ್ರಾ 33 ಗೇಟ್ ಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಜೂನ್ ಒಳಗೆ ಈ ಕೆಲಸವನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಬೆಳೆಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಎಷ್ಟೇ ವೆಚ್ಚವಾದರೂ ಹೊಸ ಗೇಟ್ ಗಳನ್ನು ಅಳವಡಿಸಿ ನೀರು ಒದಗಿಸುತ್ತೇವೆ ಎಂದರು.
ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಅಪ್ಪಟ ಸುಳ್ಳು
ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎನ್ನುವುದು ಅಪ್ಪಟ ಸುಳ್ಳು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ತಡೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು ಗ್ಯಾರಂಟಿಗಳಿಗೆ ಒಂದು ಲಕ್ಷದ 12 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 643 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಸುಮಾರು 16 ಸಾವಿರ ಕೋಟಿ ವೆಚ್ಚವಾಗಿದೆ ಎಂದರು. 52,000 ಕೋಟಿ ಗಳನ್ನು ಈ ವರ್ಷ ವೆಚ್ಚ ಮಾಡಲಾಗಿದೆ ಎಂದರು.
ವಿಬಿ ಜಿ ರಾಮ್ ಜಿ ರದ್ದುಗೊಳ್ಳಬೇಕು
6000 ಕೋಟಿಗಳನ್ನು ಪ್ರತಿ ವರ್ಷ ಖರ್ಚು ಮಾಡಲಾಗುತ್ತಿತ್ತು. ಆದರೆ ಕೇಂದ್ರದವರು ಈಗ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಯೋಜನೆಯನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದ್ದಾರೆ. ಬಡವರು, ಮಹಿಳೆಯರು, ದಲಿತರು, ಸಣ್ಣ ರೈತರಿಗೆ ತೀವ್ರ ತೊಡಕುಂಟು ಮಾಡುವ ಈ ಹೊಸ ಕಾಯ್ದೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದರು.