ಬೆಂಗಳೂರು, ಜ. 03 (DaijiworldNews/AK): ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಕೊಲೆಗೆ ಬಿಜೆಪಿಯೇ ಕಾರಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೇರ ಆರೋಪ ಮಾಡಿದರು. ಅಲ್ಲದೇ ನಮ್ಮ ಪಕ್ಷ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಪರ ನಿಲ್ಲಲಿದೆ ಎಂದು ಹೇಳಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಾನು ನಮ್ಮ ಶಾಸಕನ ಪರ ನಿಲ್ಲುತ್ತೇನೆ ಎಂದರು. ಯಾರದ್ದೋ ಮನೆ ಮುಂದೆ ರಸ್ತೆಯಲ್ಲಿ ಬ್ಯಾನರ್ ಹಾಕಿದರೆ ಏನು ಸಮಸ್ಯೆ? ನಮ್ಮ ಮನೆ ಮುಂದೆ, ಸಿಎಂ ಮನೆ ಮುಂದೆ ಬಿಜೆಪಿಯವರು ಬ್ಯಾನರ್ ಹಾಕುತ್ತಾರೆ. ಅದು ಸಾರ್ವಜನಿಕ ರಸ್ತೆ. ಸಂಭ್ರಮದಿಂದ ಕಾರ್ಯಕ್ರಮ ಮಾಡಲು ನಾವು ಬ್ಯಾನರ್ ಹಾಕಿದ್ದು ಅಷ್ಟೇ. ಈ ಘಟನೆಯಿಂದ ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ ಇದಕ್ಕೆ ಬಿಜೆಪಿ ಕಾರಣ ಅಂತ ಆರೋಪ ಮಾಡಿದರು.
ಕಳೆದ ಲೋಕಸಭಾ, ವಿಧಾನಸಭೆಯ ಸೋಲನ್ನು ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಬಳ್ಳಾರಿಗೆ ಜನಾರ್ದನ ರೆಡ್ಡಿ ಬರುವ ತನಕ ಒಂದು ಗಲಾಟೆ ಆಗಿರಲಿಲ್ಲ. ಈಗ ಶುರುವಾಗಿದೆ. ನಮ್ಮ ಶಾಸಕ ಗಲಾಟೆ ಕಂಟ್ರೋಲ್ ಮಾಡಲು ಹೋಗಿದ್ದರು ಎಂದರು.
ಜನಾರ್ದನ ರೆಡ್ಡಿ ಕೊಲೆಗೆ ಸಂಚು ಅನ್ನೋ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವೆಲ್ಲಾ ಸುಳ್ಳು. ಕೋಟೆ ಕಟ್ಟಿಕೊಂಡು ಕುಳಿತಿದ್ದಾರೆ. ಯಾರು ಕೊಲೆ ಮಾಡ್ತಾರೆ? ನೂರು ಜನ ಸೆಕ್ಯುರಿಟಿ ಇಟ್ಕೊಂಡಿದ್ದಾರೆ ಅದೆಲ್ಲಾ ಡ್ರಾಮಾ. ಜನರಿಗೆ ಇವರಿಂದ ಭಯ ಇದೆ ಅಂತ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.