ಬೆಂಗಳೂರು, ಜ.03 (DaijiworldNews/TA): ಭೂಮಿ, ಸೂರ್ಯ ಮತ್ತು ಚಂದ್ರರ ಅಪರೂಪದ ಹಾಗೂ ಅತ್ಯಂತ ವಿರಳವಾದ ಖಗೋಳ ಸಂಗಮ ಜ.3ರಂದು ಸಂಭವಿಸುತ್ತಿದ್ದು, ಖಗೋಳ ವಿಜ್ಞಾನ ದೃಷ್ಟಿಯಿಂದ ಈ ದಿನವನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲಾಗುತ್ತಿದೆ. ಒಂದೇ ದಿನ ಸೂರ್ಯ ಭೂಮಿಗೆ ಅತ್ಯಂತ ಸಮೀಪ ಬರುವ ಪೆರಿಹಿಲಿಯನ್ ಮತ್ತು ಚಂದ್ರ ಭೂಮಿಗೆ ಸಮೀಪ ಬರುವ ಸೂಪರ್ ಮೂನ್ ಸಂಭವಿಸುತ್ತಿರುವುದು ವಿಶೇಷತೆ ನೀಡಿದೆ.

ಜ.3ರಂದು ಹುಣ್ಣಿಮೆ ದಿನವಾಗಿದ್ದು, ಇದು ಈ ವರ್ಷದ ಪ್ರಥಮ ಸೂಪರ್ ಮೂನ್ ಆಗಿದೆ. ಈ ಸಂದರ್ಭ ಚಂದ್ರನು ಭೂಮಿಗೆ ಸರಾಸರಿ ದೂರಕ್ಕಿಂತ ಸುಮಾರು 27 ಸಾವಿರ ಕಿಲೋಮೀಟರ್ ಹೆಚ್ಚು ಸಮೀಪ ಬಂದು, ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ಸುಮಾರು 14 ಶೇಕಡಾ ದೊಡ್ಡದಾಗಿ ಹಾಗೂ 30 ಶೇಕಡಾ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ.
ಇದೇ ದಿನ ಸೂರ್ಯನಿಗೂ ವಿಶೇಷ ದಿನವಾಗಿದ್ದು, ಭೂಮಿ ಸೂರ್ಯನ ಸುತ್ತ ತಿರುಗುವ ದೀರ್ಘವೃತ್ತಾಕಾರದ ಪಥದ ಪರಿಣಾಮವಾಗಿ ಜ.3ರಂದು ಭೂಮಿ ಪೆರಿಹಿಲಿಯನ್ ಸ್ಥಿತಿಗೆ ತಲುಪುತ್ತದೆ. ಈ ವೇಳೆ ಭೂಮಿ ಸೂರ್ಯನಿಗೆ ಸರಾಸರಿ 15 ಕೋಟಿ ಕಿಲೋಮೀಟರ್ ದೂರವಿರುವುದಕ್ಕೆ ಬದಲಾಗಿ ಸುಮಾರು 14 ಕೋಟಿ 70 ಲಕ್ಷ ಕಿಲೋಮೀಟರ್ ದೂರಕ್ಕೆ ಸಮೀಪಿಸುತ್ತದೆ. ಇದರಿಂದ ಸೂರ್ಯ ಸಾಮಾನ್ಯ ದಿನಗಳಿಗಿಂತ ಸ್ವಲ್ಪ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ.
ಈ ವರ್ಷ ಭೂಮಿ ಜ.3ರಂದು ಪೆರಿಹಿಲಿಯನ್ಗೆ ತಲುಪಲಿದ್ದು, ಜುಲೈ 6ರಂದು ಅಪೊಹಿಲಿಯನ್ ಸ್ಥಿತಿಗೆ ತಲುಪಲಿದೆ. ಸೂರ್ಯನ ಸುತ್ತ ಭೂಮಿಯೂ ಹಾಗೂ ಭೂಮಿಯ ಸುತ್ತ ಚಂದ್ರನೂ ದೀರ್ಘವೃತ್ತಾಕಾರದ ಪಥದಲ್ಲಿ ಸಂಚರಿಸುವುದೇ ಇಂತಹ ಸುಂದರ ಹಾಗೂ ಕುತೂಹಲಕಾರಿ ಖಗೋಳ ಘಟನೆಗಳಿಗೆ ಕಾರಣವಾಗಿದೆ.
ಈ ಅಪರೂಪದ ಸಂಗಮದ ಕುರಿತು ಖಗೋಳ ಶಾಸ್ತ್ರಜ್ಞ ಡಾ. ಎ.ಪಿ. ಭಟ್ (ಉಡುಪಿ) ಪ್ರಕಟಣೆಯಲ್ಲಿ ಮಾತನಾಡಿ, “ಈ ವರ್ಷ ಜ.3ರಂದು ಹುಣ್ಣಿಮೆಯ ದಿನವೇ ಸೂಪರ್ ಮೂನ್ ಸಂಭವಿಸುತ್ತಿರುವುದು ವಿಶೇಷ. ಜೊತೆಗೆ ಭೂಮಿ ಪೆರಿಹಿಲಿಯನ್ಗೆ ಬರುವುದು ಖಗೋಳ ವಿಜ್ಞಾನಿಗಳಿಗೂ ಆಸಕ್ತಿದಾಯಕ ಘಟನೆಯಾಗಿದೆ” ಎಂದು ತಿಳಿಸಿದ್ದಾರೆ.
ಖಗೋಳ ಪ್ರಿಯರಿಗೆ ಹಾಗೂ ವಿಜ್ಞಾನಾಸಕ್ತರಿಗೆ ಜ.3ರಂದು ಆಕಾಶ ವೀಕ್ಷಣೆಗೆ ಇದು ಅಪೂರ್ವ ಅವಕಾಶವಾಗಿದ್ದು, ಪ್ರಕೃತಿಯ ಅದ್ಭುತ ಖಗೋಳ ಲೀಲೆಯನ್ನು ಕಣ್ತುಂಬಿಕೊಳ್ಳುವ ಕ್ಷಣವಾಗಲಿದೆ.