ತಿರುಪತಿ, ಜ.03 (DaijiworldNews/TA): ತಿರುಪತಿಯ ಪ್ರಸಿದ್ಧ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಭಾರಿ ಭದ್ರತಾ ಲೋಪ ಬೆಳಕಿಗೆ ಬಂದಿದ್ದು, ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ದೇಗುಲದ ಕಂಪೌಂಡ್ ಹಾರಿ ಒಳಪ್ರವೇಶಿಸಿ ಗೋಪುರ ಏರಿ ಅವಾಂತರ ಸೃಷ್ಟಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ದೇಗುಲದಲ್ಲಿ ಸೇವೆ ಮುಕ್ತಾಯವಾಗುತ್ತಿದ್ದ ವೇಳೆ, ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಆರೋಪಿಯು ದೇಗುಲದ ಆವರಣ ಪ್ರವೇಶಿಸಿದ್ದಾನೆ. ಬಳಿಕ ಏಕಾಏಕಿ ಗೋಪುರ ಏರಿ ಅಲ್ಲಿದ್ದ ಕಳಶಗಳನ್ನು ಎಳೆಯಲು ಯತ್ನಿಸಿದ್ದಾನೆ. ಈ ಘಟನೆ ದೇಗುಲದ ಸಿಬ್ಬಂದಿ ಹಾಗೂ ಭಕ್ತರಲ್ಲಿ ಗೊಂದಲ ಮೂಡಿಸಿದೆ.
ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿ ಆರೋಪಿಯನ್ನು ಸುರಕ್ಷಿತವಾಗಿ ಗೋಪುರದಿಂದ ಕೆಳಗೆ ಇಳಿಸಿದರು. ಆರೋಪಿಯನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಈ ಕುರಿತು ಪೂರ್ವ ಡಿಎಸ್ಪಿ ಭಕ್ತವತ್ಸಲಂ ಮಾತನಾಡಿ, “ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ. ಪವಿತ್ರ ದೇಗುಲದಲ್ಲಿ ನಡೆದ ಈ ಅಹಿತಕರ ಘಟನೆ ಭದ್ರತಾ ವ್ಯವಸ್ಥೆಗಳ ಕುರಿತಾಗಿ ಪ್ರಶ್ನೆಗಳನ್ನು ಎತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಎಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬ ಅಗತ್ಯವನ್ನು ಮತ್ತೊಮ್ಮೆ ಒತ್ತಿಹೇಳಿದೆ.