ಬಳ್ಳಾರಿ, ಜ. 02 (DaijiworldNews/AK): ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ದ್ವೇಷ ಭಾಷಣ ಮಸೂದೆಯಡಿ ಮೊದಲ ಅಪರಾಧಿ ನಿಮ್ಮ ಶಾಸಕ ನಾ.ರಾ.ಭರತ್ ರೆಡ್ಡಿ. ಅವರ ಮಾತುಗಳು ಪ್ರಚೋದನೆಯಲ್ಲದೇ ಮತ್ತೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.

ಅವರು ಇಂದು ಸಂಜೆ ಮಾಜಿ ಸಚಿವ ಮತ್ತು ಶಾಸಕ ಜಿ. ಜನಾರ್ಧನ ರೆಡ್ಡಿ ಅವರ ಬಳ್ಳಾರಿಯ ನಿವಾಸಕ್ಕೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಜನಾರ್ದನ ರೆಡ್ಡಿಯವರ ಮನೆ ನುಚ್ಚು ನೂರು ಮಾಡುತ್ತೇನೆ; ಪುಡಿಪುಡಿ ಮಾಡುತ್ತೇನೆ. ಭಸ್ಮ ಮಾಡುತ್ತೇನೆ; ಮುಗಿಸಿಬಿಡುವೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ನಾಡಿನ ನೆಲದ ಕಾನೂನಿನ ಬಗ್ಗೆ ಗೌರವ ಇದ್ದರೆ, ಮೊದಲು ನಿಮ್ಮ ಶಾಸಕನನ್ನು ಒದ್ದು ಒಳಗೆ ಹಾಕಿ ಎಂದು ಆಗ್ರಹಿಸಿದರು.
ಈ ರೀತಿ ಗೂಂಡಾಗರ್ದಿ ನಡೆಯುವುದಿಲ್ಲ ಎಂದು ಅವರಿಗೂ ಅರ್ಥ ಆಗಬೇಕು. ಮಹರ್ಷಿ ವಾಲ್ಮೀಕಿಯವರಿಗೆ ಯಾವ ರೀತಿ ಗೌರವ ಕೊಡಬೇಕೆಂಬ ಸೌಜನ್ಯ ಇವರಿಗೆ ಇಲ್ಲ. ಒಳ್ಳೆಯ ವಾತಾವರಣ ಹಾಳು ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದು ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಶ್ರೀರಾಮುಲು, ಆನಂದ್ ಸಿಂಗ್, ಸೋಮಶೇಖರ ರೆಡ್ಡಿ ಅವರು 25 ವರ್ಷಗಳ ಹಿಂದೆ ಇದೇ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ಇಟ್ಟು ಗೌರವ ಕೊಡುವ ಕೆಲಸ ಮಾಡಿದ್ದಾರೆ. ಇದೀಗ ರಾಜಕೀಯ ತೆವಲಿಗೆ ಈ ರೀತಿ ಗೂಂಡಾಗರ್ದಿ ಮಾಡಿಕೊಂಡು ಬ್ಯಾನರ್, ಪೋಸ್ಟರನ್ನು ಅನುಮತಿ ಇಲ್ಲದೇ ಹಾಕಿಕೊಂಡು ನಮ್ಮ ಕಾರ್ಯಕರ್ತರ ಮೇಲೆ ಗೂಂಡಾಗರ್ದಿ ಮಾಡಿದ್ದು, ಗುಂಡು ಹಾರಿಸಿದ್ದು ಜನಾರ್ದನ ರೆಡ್ಡಿಯವರ ಮನೆ ಮೇಲೆ ನಿಂತಿದ್ದವರ ಮೇಲೆ ರಾಜಕೀಯ ವ್ಯಕ್ತಿಗಳು ಗನ್ಮನ್ಗಳ ಮೂಲಕ ಗುಂಡು ಹಾರಿಸಿದ್ದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.
ಎಲ್ಲವೂ ಕೈಮೀರಿ ಹೋಗುವ ಮೊದಲು ಗೃಹ ಸಚಿವರು ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದ ಖಾಸಗಿ ಗನ್ಮನ್ಗಳ ಗುಂಡಿನಿಂದಲೇ ಅವರು ಪ್ರಾಣ ಕಳಕೊಂಡಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕ ಭರತ್ ರೆಡ್ಡಿಯವರೇ ಉತ್ತರ ಕೊಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು.
ನಿನ್ನೆ ಇಲ್ಲಿನ ಶಾಸಕ ನಾ.ರಾ.ಭರತ್ ರೆಡ್ಡಿ ನೇತೃತ್ವದಲ್ಲಿ ಗೂಂಡಾಗರ್ದಿ ನಡೆದಿದೆ. ಮಾಜಿ ಸಚಿವ ಮತ್ತು ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ವಿಚಾರದಲ್ಲಿ ಗಲಾಟೆ, ದೊಂಬಿ ಎಬ್ಬಿಸಿ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಗೂಂಡಾಗಳನ್ನು ಕರೆದುಕೊಂಡು ಬಂದು ಗೂಂಡಾಗರ್ದಿ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಕಲ್ಲುಗಳನ್ನು ಬೀಸಿದ್ದಾರೆ. ಸತೀಶ್ ರೆಡ್ಡಿ ಎಂಬ ವ್ಯಕ್ತಿ ಖಾಸಗಿ ಗನ್ಮನ್ಗಳನ್ನು ಬಳಸಿ ಗುಂಡು ಹಾರಿಸಿದ್ದಾಗಿ ಆಕ್ಷೇಪಿಸಿದರು. ಈ ಗೂಂಡಾಗರ್ದಿಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.