ನವದೆಹಲಿ, ಜ. 02 (DaijiworldNews/AA): ಇಂದೋರ್ನಲ್ಲಿ ನೀರು ಇರಲಿಲ್ಲ ಹಾಗಾಗಿ ಕುಡಿಯೋಕೆ ವಿಷ ಹಂಚಲಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ 14 ಮಂದಿ ಸಾವನ್ನಪ್ಪಿದ್ದ ಪ್ರಕರಣದ ವಿಚಾರವಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಆಡಳಿತಾರೂಢ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಆಡಳಿತ ಗಾಢ ನಿದ್ರೆಯಲ್ಲಿದೆ. ಇಂದೋರ್ನಲ್ಲಿ ನೀರು ಇರಲಿಲ್ಲ, ಆದ್ದರಿಂದ ವಿಷ ಹಂಚಲಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಈಗ ಅಲ್ಲಿನ ಪ್ರತಿ ಮನೆಯಲ್ಲೂ ಶೋಕ ಮಡುಗಟ್ಟಿದೆ. ಬಡವರು ಅಸಹಾಯಕರಾಗಿದ್ದಾರೆ. ಆದ್ರೆ ಬಿಜೆಪಿ ನಾಯಕರು ದುರಹಂಕಾರದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಮನೆ ದೀಪ ಆರಿಹೋದವರಿಗೆ ಸಾಂತ್ವನ ಹೇಳುವುದನ್ನ ಬಿಟ್ಟು, ಸರ್ಕಾರ ಧಿಮಾಕಿನ ಹೇಳಿಕೆಗಳನ್ನ ನೀಡುತ್ತಿದೆ" ಎಂದು ಪೋಸ್ಟ್ ಮಾಡಿದ್ದಾರೆ.
"ಕಲುಷಿತ ಹಾಗೂ ದುರ್ವಾಸನೆ ಬೀರುವ ನೀರಿನ ಬಗ್ಗೆ ಜನರು ಪದೇ ಪದೇ ದೂರು ನೀಡುತ್ತಾ ಬಂದಿದ್ದರು. ಆದ್ರೆ ಸರ್ಕಾರ ಅವರ ದೂರುಗಳನ್ನ ಏಕೆ ಆಲಿಸಿಲ್ಲ? ಕುಡಿಯೋ ನೀರಿನೊಂದಿಗೆ ಕೊಳಚೆ ನೀರು ಹೇಗೆ ಬೆರೆತುಹೋಯಿತು? ಸಕಾಲದಲ್ಲಿ ಏಕೆ ನೀರು ಸರಬರಾಜು ಮಾಡಲಿಲ್ಲ? ಜವಾಬ್ದಾರಿಯುತ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಕ್ರಮ ಕೈಗೊಳ್ಳೋದು ಯಾವಾಗ?" ಎಂದು ಪ್ರಶ್ನಿಸಿದ್ದಾರೆ.