ಬಳ್ಳಾರಿ, ಜ. 02 (DaijiworldNews/AA): ಬ್ಯಾನರ್ ಗಲಾಟೆ ವೇಳೆ ಶಾಸಕ ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.

ಗಲಾಟೆ ಸಂಬಂಧ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಿನ್ನೆ ನಡೆದಂತಹ ಘಟನೆ ನಮ್ಮೆಲ್ಲರಿಗೂ ನೋವು ತರಿಸಿದೆ. ಏನು ನಡೆಯಬಾರದಾಗಿತ್ತೋ ಅದೆಲ್ಲಾ ನಡೆದು ಹೋಗಿದೆ. ಅಮಾಯಕ ರಾಜಶೇಖರ್ ಅನ್ನೋ ಯುವಕನ ಸಾವಾಗಿದೆ. ಮಗನ ಬಗ್ಗೆ ತಾಯಿ ಭವಿಷ್ಯ ಕಟ್ಟಿಕೊಂಡಿದ್ದಳು. ಆ ಯುವಕ ಯಾವುದೇ ಪಾರ್ಟಿಗೆ ಸೇರಿರಲಿ. ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ. ಫೈರಿಂಗ್ನಲ್ಲಿ ರಾಜಶೇಖರ್ ಸಾವಾಗಿದೆ. ರಾಜಶೇಖರ್ ರೆಡ್ಡಿಗೆ ಸಂತಾಪ ಸೂಚಿಸುತ್ತೇನೆ. ಆ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ. ಈಗಾಗಲೇ ಆಗಿರುವ ಪ್ರತಿಯೊಂದೂ ಮಾಹಿತಿಯನ್ನೂ ಹೇಳಿದ್ದೇನೆ. ನಾನು ರಾಜಕಾರಣದಲ್ಲಿ ಸಾಕಷ್ಟು ನೋಡಿದ್ದೇನೆ" ಎಂದು ಬೇಸರ ವ್ಯಕ್ತಪಡಿಸಿದರು.
"ಬ್ಯಾನರ್ ಕಟ್ಟೋದು ಬೇಡ ಅಂತಾ ಹೇಳಿಲ್ಲ. ಕಾರು ಹೋಗೋದಕ್ಕೆ ಜಾಗ ಬಿಟ್ಟು ಕಟ್ಟಲು ಹೇಳಲಾಗಿತ್ತು. ಜಗಳ ಮಾಡಲೇಬೇಕು ಎಂದು ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಜನಾರ್ದನ ರೆಡ್ಡಿ ಬರುವಾಗ ಏಕಾಏಕೀ ಜಗಳ ಆಯ್ತು. ನಾನೂ ಬಂದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಅದನ್ನ ಅವರೂ ತೋರಿಸಿದ್ರು. ಅಷ್ಟರೊಳಗೆ ಪೊಲೀಸರು ಬಂದು, ಚದುರಿಸಿದ್ರು. ಆಗ ಗುಂಪು ಜಾಸ್ತಿ ಆಗಿ ಘೋಷಣೆಗಳು ಜಾಸ್ತಿ ಆದ್ವು. ಅದಕ್ಕೂ ಮೊದಲು ಸತೀಶ್ ರೆಡ್ಡಿ ಬಾಡಿಗಾರ್ಡ್ ಗಳು ಸಿನಿಮಾದಲ್ಲಿ ಹೊಡೆದಂತೆ ಬುಲೆಟ್ ಫೈರ್ ಮಾಡಿದ್ರು" ಎಂದು ಹೇಳಿದರು.
"ಬಳ್ಳಾರಿಯಲ್ಲಿ 1982ರಲ್ಲಿ ಮಾತ್ರ ಒಂದು ಘಟನೆ ನಡೆದಿತ್ತು. ಆ ರೀತಿಯ ಘಟನೆ ಮತ್ತೇ ಇದೀಗ ನಡೆದಿದೆ. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟಿ ಗಲಾಟೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಫೈರಿಂಗ್ ಮಾಡಿದ್ದಾರೆ. ಫೈರಿಂಗ್ ಮಾಡೋದಕ್ಕೆ ಅವಕಾಶ ಯಾರು ಕೊಟ್ರು? ಮೇಲ್ನೋಟಕ್ಕೆ ಅವರಿಂದಲೇ ಫೈರಿಂಗ್ ಆಗಿರೋದು ಗೊತ್ತಾಗ್ತಿದೆ" ಎಂದರು.