ಬೆಂಗಳೂರು, ಡಿ. 30 (DaijiworldNews/AA): ಒಂದೇ ಒಂದು ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚೋದಿಲ್ಲ, ವಿಲೀನವೂ ಮಾಡೋದಿಲ್ಲ ಅಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ಶಾಲೆಗಳನ್ನ ಮುಚ್ಚಬೇಡಿ ಎಂಬ ಸಾಹಿತಿ ಬರಗೂರು ರಾಮಚಂದ್ರಪ್ಪ ಮನವಿ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, "ಶಾಲೆಗಳನ್ನು ವಿಲೀನ ಮಾಡೋ ಅಧಿಕಾರ ನಮಗಿಲ್ಲ. ನಾವು ವೀಲಿನವೂ ಮಾಡೊಲ್ಲ. ಬರಗೂರು ರಾಮಚಂದ್ರಪ್ಪ ಅವರಿಗೂ ಮಾಹಿತಿ ಕೊಡಲಾಗಿದೆ" ಎಂದು ಹೇಳಿದರು.
"ಸ್ವ-ಇಚ್ಚೆಯಿಂದ ಕೆಪಿಎಸ್ ಶಾಲೆಗೆ ವಿಲೀನ ಮಾಡ್ತೀವಿ ಅಂದರೆ ನಾನು ಇಲ್ಲ ಅನ್ನೋಕೆ ಅಗೊಲ್ಲ. ನಾನು ಈಗಾಗಲೇ ಹೇಳಿದ್ದೇನೆ. ಒಂದು ಮಗು ಇದ್ದರೂ ಶಾಲೆ ಮುಚ್ಚೋದಿಲ್ಲ. ಟೀಚರ್ ಇರ್ತಾರೆ, ಮಧ್ಯಾಹ್ನದ ಊಟವೂ ಇರುತ್ತದೆ. ಯಾರೇ ಮುಚ್ಚುತ್ತಾರೆ ಅಂತ ಹೇಳಿದರೆ ಅದಕ್ಕೆ ನಾನು ಉತ್ತರ ಕೊಡಲು ಆಗೊಲ್ಲ. ಬರಗೂರು ಅವರಿಗೆ ಹೇಳ್ತೀನಿ. ಬೇರೆ ಅವರ ಮಾತು ಕೇಳಿ ಅವರು ಹೇಳಿಕೆ ಕೊಡಬಾರದು. ಸಿಎಂ ಅವರು ಕೂಡಾ ಮಾತಾಡೋದಾಗಿ ಹೇಳಿದ್ದಾರೆ" ಎಂದು ಮಾಹಿತಿ ನೀಡಿದರು.
"ಕೆಪಿಎಸ್ ಒಳ್ಳೆಯ ಪ್ರಾಜೆಕ್ಟ್ ನಿಲ್ಲಿಸಲು ಆಗೊಲ್ಲ. ಗುಣಮಟ್ಟದ ಶಿಕ್ಷಣ ಸಿಗಲಿದೆ. ಉತ್ತೀರ್ಣ ಅಂಕ ಕಡಿಮೆ ಮಾಡಿರೋದಕ್ಕೆ ಬರಗೂರು ಅವರ ವಿರೋಧ ಇದೆ. ಬೇರೆ ರಾಜ್ಯದಲ್ಲಿ ಏನಿದೆ ಅಂತ ಬರಗೂರು ರಾಮಚಂದ್ರಪ್ಪ ನೋಡಿಕೊಂಡು ಬರಲಿ. ಯಾಕೆ ಬೇರೆ ರಾಜ್ಯದವರಿಗೆ ಕೆಲಸ ಸಿಗುತ್ತದೆ ಅಂತ ತಿಳಿದುಕೊಂಡರೆ ಉತ್ತರ ಸಿಗುತ್ತದೆ. ಉದ್ಯೋಗ ಸಿಗೋದ್ರಲ್ಲೂ ಇದು ಒಳ್ಳೆ ಬೆಳವಣಿಗೆ. ವಿಲೀನ ನಾವು ಮಾಡೊಲ್ಲ. ಬಿಇಓ ಹೇಳಿದ್ದರೆ ಅವರನ್ನ ಕರೆದುಕೊಂಡು ಬಂದರೆ ಅವರನ್ನ ಅಮಾನತು ಮಾಡ್ತೀನಿ" ಎಂದು ತಿಳಿಸಿದರು.