ನವದೆಹಲಿ, ಡಿ. 30 (DaijiworldNews/TA): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕುಟುಂಬದಲ್ಲಿ ಮತ್ತೆ ಮದುವೆ ಸಂಭ್ರಮ ಶುರುವಾಗಿದೆ. ಸುಮಾರು 28 ವರ್ಷಗಳ ಬಳಿಕ ಗಾಂಧಿ ಕುಟುಂಬದಲ್ಲಿ ವಿವಾಹದ ಸಂಭ್ರಮ ಕಾಣಿಸಿಕೊಳ್ಳುತ್ತಿದ್ದು, ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ತಮ್ಮ ಬಹುಕಾಲದ ಗೆಳತಿ ಅವಿವ್ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಏಳು ವರ್ಷಗಳ ಪ್ರೀತಿ: 25 ವರ್ಷದ ರೈಹಾನ್ ವಾದ್ರಾ ಮತ್ತು ಅವಿವ್ ಬೇಗ್ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು. 18ನೇ ವಯಸ್ಸಿನಿಂದಲೇ ಆರಂಭವಾದ ಈ ಸಂಬಂಧ ಇದೀಗ ವಿವಾಹದ ಹಂತಕ್ಕೆ ತಲುಪಿದೆ. ಇತ್ತೀಚೆಗೆ ರೈಹಾನ್ ಅವರು ಅವಿವ್ ಅವರಿಗೆ ಮದುವೆಯ ಪ್ರಸ್ತಾವನೆ ಇಟ್ಟಿದ್ದು, ಇದಕ್ಕೆ ಎರಡೂ ಕುಟುಂಬಗಳೂ ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ.
ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರ ವಿವಾಹಕ್ಕೆ ಈಗಾಗಲೇ 28 ವರ್ಷಗಳು ಕಳೆದಿವೆ. ಗಾಂಧಿ ಕುಟುಂಬದಲ್ಲಿ ಇಷ್ಟು ವರ್ಷಗಳ ಬಳಿಕ ಮತ್ತೊಂದು ಮದುವೆ ನಡೆಯುತ್ತಿರುವುದು ವಿಶೇಷವಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 55 ವರ್ಷ ವಯಸ್ಸಾದರೂ ಮದುವೆಯಾಗಿಲ್ಲ. ಈಗ ಕುಟುಂಬದ ಕಿರಿಯ ಸದಸ್ಯ ರೈಹಾನ್ ಅವರ ಮದುವೆ ಸಂಭ್ರಮ ಮನೆಮಾಡಿದೆ. ಅವಿವ್ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಈಗಾಗಲೇ ವಾದ್ರಾ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನಲಾಗಿದೆ.
ಯಾರು ಈ ರೈಹಾನ್ ವಾದ್ರಾ?: ರೈಹಾನ್ ವಾದ್ರಾ ಒಬ್ಬ ವಿಶುವಲ್ ಆರ್ಟಿಸ್ಟ್. ಹತ್ತು ವರ್ಷ ವಯಸ್ಸಿನಲ್ಲೇ ಅವರಿಗೆ ಕ್ಯಾಮರಾ ಮತ್ತು ಫೋಟೋಗ್ರಫಿಯ ಮೇಲೆ ಆಸಕ್ತಿ ಮೂಡಿತ್ತು. ಮುಂಬೈನ ಕೊಲಾಬಾದಲ್ಲಿರುವ ‘ಎಪಿಆರ್ಇ ಆರ್ಟ್ ಹೌಸ್’ ಕಲಾ ಗ್ಯಾಲರಿಯಲ್ಲಿ ಅವರ ಪೋರ್ಟ್ಫೋಲಿಯೊ ಪ್ರದರ್ಶಿತವಾಗಿದೆ. ಇದರಲ್ಲಿ ವನ್ಯಜೀವಿ, ಬೀದಿ ಹಾಗೂ ವಾಣಿಜ್ಯ ಫೋಟೋಗ್ರಫಿಯ ಚಿತ್ರಗಳು ಸೇರಿವೆ.
2017ರಲ್ಲಿ ಶಾಲಾ ಕ್ರಿಕೆಟ್ ಪಂದ್ಯವೊಂದರ ವೇಳೆ ರೈಹಾನ್ ಅವರ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಈ ನೋವಿನ ಅನುಭವವೇ ಅವರ ಕಲೆಗೆ ಹೊಸ ದಿಕ್ಕು ನೀಡಿತು. 2021ರಲ್ಲಿ ನವದೆಹಲಿಯ ಬಿಕಾನೇರ್ ಹೌಸ್ನಲ್ಲಿ ‘ಡಾರ್ಕ್ ಪರ್ಸೆಪ್ಶನ್’ ಹೆಸರಿನ ಏಕವ್ಯಕ್ತಿ ಪ್ರದರ್ಶನವನ್ನು ಅವರು ಆಯೋಜಿಸಿದ್ದರು. ಈ ಪ್ರದರ್ಶನ ‘ಕಾಲ್ಪನಿಕ ಸ್ವಾತಂತ್ರ್ಯ’ ಮತ್ತು ಬೆಳಕು–ಕತ್ತಲೆಯ ಗ್ರಹಿಕೆಯನ್ನು ಆಧರಿಸಿತ್ತು.
ತಾತನಿಂದ ಬಂದ ಫೋಟೋಗ್ರಫಿ ಆಸಕ್ತಿ : ರೈಹಾನ್ ಅವರ ತಾಯಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರೋತ್ಸಾಹವೂ ಕಲೆಯತ್ತ ಅವರ ಆಸಕ್ತಿಗೆ ಕಾರಣವಾಗಿದೆ. ಅಲ್ಲದೆ, ರೈಹಾನ್ ಅವರ ಅಜ್ಜ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಫೋಟೋಗ್ರಫಿಗೆ ಅಪಾರ ಆಸಕ್ತಿ ಹೊಂದಿದ್ದವರು. ತಾತನ ಫೋಟೋಗ್ರಫಿ ಕೆಲಸಗಳನ್ನು ರೈಹಾನ್ ಆಳವಾಗಿ ಅಧ್ಯಯನ ಮಾಡಿದ್ದಾರೆ ಎನ್ನಲಾಗಿದೆ.
ರೈಹಾನ್ ಅವರ ಭಾವಿ ಪತ್ನಿ ಅವಿವ್ ಬೇಗ್ ಕೂಡ ಫೋಟೋಗ್ರಾಫರ್ ಹಾಗೂ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡಿದ್ದಾರೆ. ಕಲೆಯ ಮೇಲಿನ ಒಲವೇ ಈ ಜೋಡಿಯನ್ನು ಇನ್ನಷ್ಟು ಹತ್ತಿರ ತಂದಿದೆ ಎನ್ನಲಾಗುತ್ತಿದೆ. ಗಾಂಧಿ ಕುಟುಂಬದಲ್ಲಿ ನಡೆಯಲಿರುವ ಈ ಮದುವೆ, ರಾಜಕೀಯ ವಲಯದ ಜೊತೆಗೆ ಸಾಮಾಜಿಕ ವಲಯದಲ್ಲೂ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಮದುವೆಯ ದಿನಾಂಕ ಹಾಗೂ ಇತರೆ ವಿವರಗಳು ಪ್ರಕಟವಾಗುವ ನಿರೀಕ್ಷೆಯಿದೆ.