ನವದೆಹಲಿ, ಡಿ. 29 (DaijiworldNews/AA): ಅಲ್ಪಸಂಖ್ಯಾತರ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕೃತ್ಯಗಳೇ ಎಲ್ಲ ಹೇಳುತ್ತವೆ. ನಮ್ಮ ದೇಶದಲ್ಲಿ ಆ ರೀತಿಯ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಪಾಕ್ಗೆ ತಿರುಗೇಟು ನೀಡಿದೆ.

ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ಭಾರತ ಅಂತಹ ಹೇಳಿಕೆಗಳನ್ನು ತಿರಸ್ಕರಿಸಿದೆ. ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಲೇ ಬಂದಿರುವ ದೇಶದಿಂದ ಈ ಹೇಳಿಕೆ ಬಂದಿದೆ ಎಂದು ಟೀಕಿಸಿದ್ದಾರೆ.
"ಈ ವಿಷಯದಲ್ಲಿ ಕಳಪೆ ದಾಖಲೆಯನ್ನು ಹೊಂದಿರುವ ದೇಶದ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತೇವೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪಾಕಿಸ್ತಾನದ ಆಂತರಿಕ ಸಮಸ್ಯೆಗಳ ನಡುವೆ ನಮ್ಮ ದೇಶದ ಕಡೆ ಬೆರಳು ತೋರಿಸುವ ಪ್ರಯತ್ನಗಳ ಕಡೆಗೆ ನಾವು ಗಮನವನ್ನು ನೀಡುವುದಿಲ್ಲ. ತಮ್ಮ ದೇಶದ ಮೇಲಿನ ಆರೋಪವನ್ನು ನಮ್ಮೆಡೆಗೆ ತಿರುಗಿಸುವ ಉಪಾಯವಿದು" ಎಂದು ಜೈಸ್ವಾಲ್ ಹೇಳಿದ್ದಾರೆ.