ಬೆಂಗಳೂರು, ಡಿ. 29 (DaijiworldNews/AA): ರಾಜ್ಯದಲ್ಲಿ ಮಾದಕ ವಸ್ತು ಪ್ರಕರಣಗಳು ಪತ್ತೆಯಾಗುತ್ತಿದ್ದರು, ಅದನ್ನು ನಿಗ್ರಹಿಸುವಲ್ಲಿ ಹಾಗೂ ಗೃಹ ಇಲಾಖೆಯನ್ನು ನಿರ್ವಹಿಸುವಲ್ಲಿ ಸಚಿವ ಡಾ. ಜಿ. ಪರಮೇಶ್ವರ್ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ರಾಜ್ಯದಲ್ಲಿ 'ಕಾಂಗ್ರೆಸ್ ದುರಾಡಳಿತದಿಂದ, ಗಂಧದ ನಾಡು ಗಾಂಜಾ ಬೀಡಾಗುತ್ತಿದೆ' ಕುರಿತ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, "ರಾಜ್ಯದಲ್ಲಿ ಮಾದಕ ವಸ್ತು ಪ್ರಕರಣ ಸಂಚಲನ ಸೃಷ್ಟಿಸಿದೆ. ಆದರೂ ಗೃಹ ಸಚಿವರು, ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬದಲಾಗಿ ರಾಜ್ಯದಲ್ಲಿ ಮಾದಕ ವಸ್ತು ತಯಾರಿಕಾ ಘಟಕಗಳು ಹೆಚ್ಚಾಗುತ್ತಿವೆ" ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲೂ ಕೂಡ ಗೃಹ ಸಚಿವರಿಗೆ ಸಾಧ್ಯವಾಗಿಲ್ಲ" ಎಂದು ವಾಗ್ದಾಳಿ ನಡೆಸಿದರು.
"ಮಾದಕ ವಸ್ತು ಮಾರಾಟ ಸ್ಥಳಗಳಿಗೆ, ಸರ್ಕಾರದ ಸಹಕಾರ ಇದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗಂಧದ ನಾಡು ಗಾಂಜಾ ಬೀಡಾಗುತ್ತಿದೆ. ಇದರಿಂದಾಗಿ ರಾಜ್ಯದ ಜನ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ತಿಳಿಸಿದರು.