ನವದೆಹಲಿ, ಡಿ. 23(DaijiworldNews/TA): ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಬೆರಳಣಿಕೆಯ ದಿನಗಳು ಮಾತ್ರ ಬಾಕಿ ಇವೆ. ಚರ್ಚ್ಗಳು, ಮನೆಗಳು ಕೇಕ್ ಹಾಗೂ ಕ್ರಿಸ್ಮಸ್ ಟ್ರೀಗಳಿಂದ ಅಲಂಕೃತವಾಗುತ್ತಿದ್ದು, ಸಂಭ್ರಮದ ವಾತಾವರಣ ಎಲ್ಲೆಡೆ ಮನೆಮಾಡಿದೆ. ಕುಟುಂಬಗಳಲ್ಲಷ್ಟೇ ಅಲ್ಲ, ಇಂದಿನ ದಿನಗಳಲ್ಲಿ ಆಫೀಸ್ಗಳಲ್ಲೂ ಸೀಕ್ರೆಟ್ ಸಾಂಟಾ ಆಚರಣೆ ಜೋರಾಗಿ ನಡೆಯುತ್ತಿದೆ.

ಕ್ರಿಸ್ಮಸ್ ಎಂದರೆ ಸಂತೋಷ, ಸಂಭ್ರಮ ಮತ್ತು ಪರಸ್ಪರ ಪ್ರೀತಿಯ ಹಬ್ಬ. ಕ್ರೈಸ್ತ ಬಾಂಧವರು ಒಂದು ತಿಂಗಳ ಮುಂಚಿತವಾಗಿಯೇ ಹಬ್ಬದ ಸಿದ್ಧತೆ ಆರಂಭಿಸುತ್ತಾರೆ. ಗಿಫ್ಟ್ ನೀಡುವ ಸಂಪ್ರದಾಯ ಈ ಹಬ್ಬದ ಅವಿಭಾಜ್ಯ ಅಂಗವಾಗಿದ್ದು, ಇದೀಗ ಅದು ಕುಟುಂಬದಾಚೆಗೂ ವಿಸ್ತರಿಸಿ ಶಾಲೆ, ಕಾಲೇಜು ಹಾಗೂ ಕೆಲಸದ ಸ್ಥಳಗಳಲ್ಲೂ ಜನಪ್ರಿಯವಾಗಿದೆ.
ಆದರೆ ಆಫೀಸ್ನಲ್ಲಿ ಎಲ್ಲರ ಮೆಚ್ಚುಗೆ ಪಡೆದಿರುವ ಈ ಸೀಕ್ರೆಟ್ ಸಾಂಟಾ ಆಚರಣೆ ಆರಂಭವಾದದ್ದು ಹೇಗೆ? ಅದರ ಹಿಂದಿನ ಕಥೆ ಏನು? ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಈ ಬಗ್ಗೆ ಒಂದು ಕುತೂಹಲಕಾರಿ ವಿಚಾರ ಇಲ್ಲಿದೆ.
ಸೀಕ್ರೆಟ್ ಸಾಂಟಾ ಸಂಪ್ರದಾಯದ ಹಿನ್ನೆಲೆ : ಸೀಕ್ರೆಟ್ ಸಾಂಟಾ ಪರಿಕಲ್ಪನೆ ಪಾಶ್ಚಿಮಾತ್ಯ ದೇಶಗಳಲ್ಲಿ ಆರಂಭವಾದ ಸಂಪ್ರದಾಯ. ಇದು ಕ್ರಮೇಣ ವಿಶ್ವದ ವಿವಿಧ ಭಾಗಗಳಿಗೆ ಹರಡಿತು. ಐರ್ಲೆಂಡ್ನಲ್ಲಿ ಇದನ್ನು ‘ಕ್ರಿಸ್ ಕ್ರಿಂಗಲ್’ ಅಥವಾ ‘ಕ್ರಿಸ್ ಕಿಂಡಲ್’, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ‘ಸೀಕ್ರೆಟ್ ಸಾಂಟಾ’ ಅಥವಾ ‘ಕ್ರಿಸ್ ಕ್ರಿಂಗಲ್’ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.
ಪರಸ್ಪರ ಪ್ರೀತಿ, ಹಂಚಿಕೆ ಮತ್ತು ಅಚ್ಚರಿಯ ಸಂತೋಷವೇ ಈ ಆಚರಣೆಯ ಮೂಲ ತತ್ವ. ಹೆಸರು ತಿಳಿಯದೇ ಉಡುಗೊರೆ ನೀಡುವ ಮೂಲಕ, ಸ್ನೇಹ ಮತ್ತು ಸಾಮರಸ್ಯವನ್ನು ಹೆಚ್ಚಿಸುವುದೇ ಇದರ ಉದ್ದೇಶ.
ಆಫೀಸ್ನಲ್ಲಿ ಸೀಕ್ರೆಟ್ ಸಾಂಟಾ ಏಕೆ ಜನಪ್ರಿಯ? : ಇಂದು ಸೀಕ್ರೆಟ್ ಸಾಂಟಾ ಕೆಲಸದ ಸ್ಥಳಗಳಲ್ಲಿ ಅತ್ಯಂತ ಜನಪ್ರಿಯ ಸಂಸ್ಕೃತಿಯಾಗಿದೆ. ಇದು ಸಹೋದ್ಯೋಗಿಗಳ ನಡುವೆ ಒಡನಾಟವನ್ನು ಹೆಚ್ಚಿಸುವುದರ ಜೊತೆಗೆ, ದಿನನಿತ್ಯದ ಕೆಲಸದ ಒತ್ತಡದಿಂದ ಸ್ವಲ್ಪ ವಿಶ್ರಾಂತಿ ಮತ್ತು ಉತ್ಸಾಹವನ್ನು ನೀಡುತ್ತದೆ. ತಂಡದ ಮನೋಭಾವ, ಸ್ನೇಹ ಮತ್ತು ಉತ್ತಮ ಕೆಲಸದ ವಾತಾವರಣ ನಿರ್ಮಾಣಕ್ಕೆ ಇದು ಸಹಕಾರಿ ಎನ್ನಲಾಗುತ್ತದೆ.
ಸೀಕ್ರೆಟ್ ಸಾಂಟಾ ಆಟ ಹೇಗೆ ಆಡುತ್ತಾರೆ? :
ಎಲ್ಲರೂ ತಮ್ಮ ಹೆಸರುಗಳನ್ನು ಚೀಟಿಗಳಲ್ಲಿ ಬರೆದು ಒಂದು ಡಬ್ಬಿಯಲ್ಲಿ ಹಾಕಬೇಕು.
ಆಫೀಸ್ನಲ್ಲಿರುವ ಜನರಷ್ಟು ಚೀಟಿಗಳು ಇರಬೇಕು.
ಪ್ರತಿಯೊಬ್ಬರೂ ಡಬ್ಬಿಯಿಂದ ಒಂದು ಚೀಟಿ ತೆಗೆದುಕೊಂಡು, ಅದನ್ನು ಯಾರಿಗೂ ತೋರಿಸದೇ ನೋಡಬೇಕು.
ಆ ಚೀಟಿಯಲ್ಲಿ ಬಂದ ವ್ಯಕ್ತಿಗೆ ರಹಸ್ಯವಾಗಿ ಉಡುಗೊರೆ ನೀಡಬೇಕು.
ಹೀಗೆ ಪ್ರತಿಯೊಬ್ಬರೂ ಯಾರಾದರೂ ಒಬ್ಬರ “ಸೀಕ್ರೆಟ್ ಸಾಂಟಾ” ಆಗುತ್ತಾರೆ.
ಆಟ ಮೋಜಿಗಾಗಿಯೋ ಹಬ್ಬದ ಸಂಭ್ರಮಕ್ಕಾಗಿಯೋ ನಡೆಯುವುದು ನಿಜವಾದರೂ ಈ ಚಿಕ್ಕ ಆಟದ ಮೂಲಕ ಬಾಂಧವ್ಯ ಗಟ್ಟಿಗೊಳಿಸೋ ದೊಡ್ಡ ಉದ್ದೇಶ ಸಂಬಂಧಕ್ಕೆ ಮತ್ತಷ್ಟು ಬಲ ನೀಡುವುದಂತು ಸತ್ಯ.