ಬೆಂಗಳೂರು,ಡಿ. 23(DaijiworldNews/AK): ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನು ವಿಧಾನಸಭೆಯಲ್ಲಿ ಆತುರದಲ್ಲಿ ಅಂಗೀಕರಿಸಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದರು.

ಸೋಮವಾರ ವಿಧಾನಸೌಧದಲ್ಲಿ ಅಧಿವೇಶನದ ಕಾರ್ಯಕಲಾಪಗಳ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಲ್ಲಿ ಬೇರೆ ಬೇರೆ ವಿಷಯದ ಬಗ್ಗೆ ಚರ್ಚೆಗಳನ್ನು ಮಾಡಿದ್ದರಿಂದ ಗೊಂದಲ ಉಂಟಾಯಿತು ಎಂದು ಹೇಳಿದರು.
ಅತ್ಯಂತ ಮಹತ್ವದ ವಿಧೇಯಕದ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆಯಲ್ಲಿ ತೊಡಗಿದರೆ ಏನು ಮಾಡುವುದು. ಇದೇ ವಿಧೇಯಕದ ಕುರಿತು ವಿಧಾನಪರಿಷತ್ತಿನಲ್ಲಿ ವಿವರವಾಗಿ ಚರ್ಚೆ ನಡೆದಿದೆ. ವಿಧಾನಸಭೆಯಲ್ಲೂ ಚರ್ಚೆಗೆ ಮುಕ್ತ ಅವಕಾಶವಿದ್ದರೂ ವಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂದರು.