ಬೆಳಗಾವಿ, ಡಿ. 18(DaijiworldNews/TA): ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗಾವಿಯ ಸರ್ಕೀಟ್ ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೋಕಾಕ್ನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಆರೋಗ್ಯ ವಿಚಾರಿಸಲು ಬಂದಿದ್ದೇನೆ ಎಂದು ಜಾರಕಿಹೊಳಿ ಮಾಧ್ಯಮಗಳಿಗೆ ಹೇಳಿದರೂ, ಸಿಎಂ ಅವರೊಂದಿಗೆ ಕೊಠಡಿಯಲ್ಲಿ ಕೆಲಕಾಲ ನಡೆದ ರಹಸ್ಯ ಮಾತುಕತೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ಸೂಚಿಸಿರುವುದು ಗಮನಸೆಳೆದಿದೆ. ‘ಸರ್, ಈ ವಿಷಯದಲ್ಲಿ ನೀವು ಸ್ವಲ್ಪ ಜೋರಾಗಿ ಮಾತನಾಡಬೇಕು’ ಎಂದು ಸಲಹೆ ನೀಡಿದ್ದು, ಇದರ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಂದೇಶ ರವಾನಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಸಚಿವ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಪರ ನಿಂತಿರುವ ಹಿನ್ನೆಲೆಯಲ್ಲಿ, ಇದೀಗ ಸಹೋದರ ರಮೇಶ್ ಜಾರಕಿಹೊಳಿ ಕೂಡ ‘ನಾವು ನಿಮ್ಮ ಜೊತೆಗಿದ್ದೇವೆ’ ಎಂಬ ಸಂದೇಶ ನೀಡಿದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, “ಈ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕಷ್ಟು ಧೈರ್ಯವಾಗಿದ್ದಾರೆ. ನಮಗೇ ಧೈರ್ಯ ಹೇಳುವಷ್ಟು ಅವರು ಆತ್ಮವಿಶ್ವಾಸದಲ್ಲಿದ್ದಾರೆ. ನಾವೇನು ಅವರಿಗೆ ಧೈರ್ಯ ಹೇಳಬೇಕಾದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.