ನವದೆಹಲಿ, ಡಿ. 18(DaijiworldNews/TA): ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಏಕತಾ ಪ್ರತಿಮೆಯನ್ನು ಕೆತ್ತಿದ ಹಿರಿಯ ಶಿಲ್ಪಿ ರಾಮ್ ಸುತರ್ ಅವರು ನಿಧನರಾಗಿದ್ದಾರೆ. ಬುಧವಾರ ತಡರಾತ್ರಿ ನೋಯ್ಡಾದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅನಿಲ್ ಸುತರ್ ತಿಳಿಸಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿದ್ದು, ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

1925ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡುರ್ ಗ್ರಾಮದಲ್ಲಿ ಜನಿಸಿದ ರಾಮ್ ಸುತರ್ ಅವರು ಬಾಲ್ಯದಿಂದಲೇ ಶಿಲ್ಪಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಮುಂಬೈನ ಪ್ರತಿಷ್ಠಿತ ಜೆಜೆ ಸ್ಕೂಲ್ ಆಫ್ ಆರ್ಟ್ & ಆರ್ಕಿಟೆಕ್ಚರ್ನಲ್ಲಿ ಚಿನ್ನದ ಪದಕ ಪಡೆದ ಅವರು, ತಮ್ಮ ಜೀವನದಲ್ಲಿ ಅನೇಕ ಅಮೂಲ್ಯ ಕಲಾಕೃತಿಗಳನ್ನು ದೇಶಕ್ಕೆ ನೀಡಿದರು.
ಸಂಸತ್ ಭವನ ಆವರಣದಲ್ಲಿರುವ ಧ್ಯಾನ ಸ್ಥಿತಿಯಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಐತಿಹಾಸಿಕ ಪ್ರತಿಮೆ ಹಾಗೂ ಕುದುರೆಯ ಮೇಲೆ ಸವಾರನಾಗಿ ಕಾಣಿಸುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ರಾಮ್ ಸುತರ್ ಅವರ ಅಪೂರ್ವ ಶಿಲ್ಪಕಲೆಯ ಜೀವಂತ ಸಾಕ್ಷಿಗಳಾಗಿವೆ.
ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣಾರ್ಥ ಗುಜರಾತ್ನಲ್ಲಿ ನಿರ್ಮಿಸಲಾದ ಏಕತಾ ಪ್ರತಿಮೆಯು ಅವರ ಶಿಲ್ಪಕಲಾ ಜೀವನದ ಮಹತ್ವದ ಮೈಲಿಗಲ್ಲಾಗಿದೆ.
ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ನೀಡಿದ ಅನನ್ಯ ಸೇವೆಗೆ ರಾಮ್ ಸುತರ್ ಅವರಿಗೆ 1999ರಲ್ಲಿ ಪದ್ಮಶ್ರೀ ಪ್ರಶಸ್ತಿ, 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರ ಜೊತೆಗೆ ಮಹಾರಾಷ್ಟ್ರ ರಾಜ್ಯದ ಅತ್ಯುನ್ನತ ಗೌರವವಾದ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನೂ ಅವರು ಇತ್ತೀಚೆಗೆ ಪಡೆದಿದ್ದರು.
ರಾಮ್ ಸುತರ್ ಅವರ ನಿಧನದಿಂದ ಭಾರತೀಯ ಶಿಲ್ಪಕಲಾ ಲೋಕಕ್ಕೆ ತುಂಬಲಾರದ ನಷ್ಟ. ಅವರ ಕೃತಿಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಿ ಉಳಿಯಲಿವೆ.