ಬೆಳಗಾವಿ, ಡಿ. 18 (DaijiworldNews/AK): ರಾಜ್ಯದ ಖಜಾನೆಯನ್ನ ಲೂಟಿ ಮಾಡಿ ಕಾಂಗ್ರೆಸ್ ಸರ್ಕಾರ ತನ್ನ ಹೈಕಮಾಂಡ್ ನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಗದಗದಲ್ಲಿ ಆಯುಷ್ ಇಲಾಖೆಯ ಔಷಧಿ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಭ್ರಷ್ಟಾಚಾರದ ಮುಖೇನ ಕಾಂಗ್ರೆಸ್ ಹೈಕಮಾಂಡ್ಗೆ ಹಣ ಸಂದಾಯ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅವರ ಹೈಕಮಾಂಡ್ ಎಟಿಎಂ ಆಗಿ ಪರಿವರ್ತನೆ ಆಗುತ್ತೆ ಅಂತಾ ಹಿಂದೆನೇ ಹೇಳಿದ್ದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಹಣ ಪೋಲಾಯ್ತು. ಹೈಕಮಾಂಡ್ ತೃಪ್ತಿ ಪಡಿಸಲು ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುವಂತಾಗಿದೆ. ಗುತ್ತಿಗೆದಾರರ ಸಂಘದವರು ಸಹ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ಬಿಟ್ಟರೆ ರಾಜ್ಯದಲ್ಲಿ ಏನೂ ಅಭಿವೃದ್ಧಿ ಆಗ್ತಿಲ್ಲ ಎಂದು ಕಿಡಿಕಾರಿದ್ದಾರೆ.
ದುಡ್ಡು ಹೊಡೆಯೋರಿಗೆ ಬಡವರಾದರೇನೂ ಶ್ರೀಮಂತರಾದರೇನು? ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ತೃಪ್ತಿ ಪಡಿಸುವ ಕೆಲಸ ನಡೀತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.